

ಬೆಳಗಾವಿ: ಶತಮಾನಗಳಿಂದ ಶಿಕ್ಷಣ, ಆರೋಗ್ಯ, ಸಾಮಾಜಿಕ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಕೆಎಲ್‌ಇ ಸಂಸ್ಥೆಯು ಇದೀಗ ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಒಂದು ಹೆಜ್ಜೆ ಮುಂದಿಟ್ಟಿದ್ದು, ಕಾಹೆರ್‌ನಲ್ಲಿ ಪ್ರಾಯೋಗಿಕ ಪೋರ್ಟಿಫಿಕೇಶನ್ ಲ್ಯಾಬ್ ಕೇಂದ್ರ ಆರಂಭಿಸಿದೆ. ನಗರದ ಕಾಹೆರ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಕಾನ್ಪುರದ ರಾಷ್ಟ್ರೀಯ ಸಕ್ಕರೆ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ನರೇಂದ್ರ ಮೋಹನ್ ಅವರು ಕೇಂದ್ರ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಆಹಾರ ಕ್ಷೇತ್ರದಲ್ಲಿ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸಲು, ಆಹಾರ ಕ್ರಮವನ್ನು ಸುಧಾರಿಸಲು ಮತ್ತು ಸೂಕ್ಷ್ಮ ಪೋಷಕಾಂಶಗಳ ಕೊರತೆ ತಡೆಗಟ್ಟಲು ಮತ್ತು ನಿಯಂತ್ರಿಸಲು ಕಾಹೆರ ಮತ್ತು ಆಹಾರ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಪಾಲುದಾರರೊಂದಿಗೆ ಪರಸ್ಪರ ಒಪ್ಪಂದ ಮಾಡಿಕೊಂಡಿತು.
ಈ ಒಪ್ಪಂದಿಂದಾಗಿ ಸಾಮಾನ್ಯವಾಗಿ ಸೇವಿಸುವ ಆಹಾರ ಪದಾರ್ಥಗಳಾದ ಗೋಧಿ, ಅಕ್ಕಿ, ಸಕ್ಕರೆ ಮತ್ತು ಎಣ್ಣೆಯಂತಹ ಅಗತ್ಯ ಸೂಕ್ಷ್ಮ ಪೋಷಕಾಂಶಗಳನ್ನು ಬಲಪಡಿಸುವ ಸಹಯೋಗದ ಪ್ರಯತ್ನಗಳನ್ನು ಬಲಪಡಿಸುವ ಗುರಿ ಹೊಂದಿದೆ. ಭಾರತದಲ್ಲಿ ಹೆಚ್ಚುತ್ತಿರುವ ಸೂಕ್ಷ್ಮ ಪೋಷಕಾಂಶಗಳ ಕೊರತೆ ನಿಭಾಯಿಸುತ್ತದೆ. ಈ ಒಪ್ಪಂದ ಪತ್ರಕ್ಕೆ ಕೆಎಎಚ್‌ಇಆರ್‌ನ ರಿಜಿಸ್ಟ್ರಾರ್ ಡಾ. ಎಂ.ಎಸ್.ಗಣಾಚಾರಿ ಅಂಕಿತ ಹಾಕಿದರು.
ಈ ಕೇಂದ್ರವು ದೇಶಾದ್ಯಂತ ಪೌಷ್ಟಿಕಾಂಶದ ಫಲಿತಾಂಶಗಳನ್ನು ಸುಧಾರಿಸುವ ಗುರಿ ಹೊಂದಿದೆ. ಅಲ್ಲದೆ, ಆಹಾರ ಪದಾರ್ಥಗಳ ಸಂಶೋಧನೆ ಮತ್ತು ಅಭಿವೃದ್ಧಿಯ ಪ್ರವರ್ತಕ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.
ಕಾಹೆರ ಉಪಕುಲಪತಿ ಡಾ.ನಿತಿನ್ ಎಂ.ಗಂಗನೆ, ಸಂಶೋಧನೆ ಸಲಹೆಗಾರ ಡಾ.ಮದನ್ ಗೋಡ್ಬೋಲೆ, ಅಂಕಲಿಯ ಶಿವಶಕ್ತಿ ಸಕ್ಕರೆ ಕಾರ್ಖಾನೆಯ ತಾಂತ್ರಿಕ ವಿಭಾಗದ ನಿರ್ದೇಶಕ ಕೃಷ್ಣನ್, ಡಾ.ಪ್ರಮೋದ ಎಚ್.ಜೆ. ಇತರರಿದ್ದರು.
ಕೆಎಲ್‌ಇ ಸಂಸ್ಥೆ 109ನೇ ಸಂಸ್ಥಾಪನಾ ದಿನ ಕಾರ್ಯಕ್ರಮ ನ.14ರಂದು ಮಧ್ಯಾಹ್ನ 1 ಗಂಟೆಗೆ ಜೆಎನ್‌ಎಂಸಿಯ ಸೆಂಟೀನರಿ ಕನ್ವೆನ್ಷನ್ ಸಭಾಂಗಣದಲ್ಲಿ ಜರುಗಲಿದೆ. ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ, ಪುಣೆಯ ರುಬಿ ಹಾಲ್ ಕ್ಲಿನಿಕ್ ಮುಖ್ಯ ಹೃದಯರೋಗ ತಜ್ಞ, ಮ್ಯಾನೇಜಿಂಗ್ ಟ್ರಸ್ಟಿ ಡಾ.ಪರ್ವೇಜ್ ಕೆ.ಗ್ರಾಂಟ್ ಆಗಮಿಸಲಿದ್ದಾರೆ. ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದ ಕೆಎಲ್‌ಇ ಸಂಸ್ಥೆಯ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಸನ್ಮಾನಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಎಸ್. ಕೌಜಲಗಿ ವಹಿಸಲಿದ್ದಾರೆ ಎಂದು ಕೆಎಲ್‌ಇ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.