ಬಂದರು ಕಾಮಗಾರಿ ಅಪೂರ್ಣ : ಮರವಂತೆ ಮೀನುಗಾರರ ಆತಂಕ ಇಮ್ಮಡಿ

port
ಮರವಂತೆ ಹೊರಬಂದರು ಪ್ರದೇಶದಲ್ಲಿ ನಿಲ್ಲಿಸಲಾಗಿರುವ ದೋಣಿಗಳು.
Published on

ಬಿ.ರಾಘವೇಂದ್ರ ಪೈ ಗಂಗೊಳ್ಳಿ

ಮರವಂತೆಯಲ್ಲಿ ನಿರ್ಮಾಣವಾಗುತ್ತಿರುವ ಕೇರಳ ಮಾದರಿ ಔಟ್‌ಡೋರ್ ಬಂದರಿನ ಒಂದನೇ ಹಂತದ ಕಾಮಗಾರಿ ಅಪೂರ್ಣಗೊಂಡಿದ್ದು, 2ನೇ ಹಂತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ದೊರೆತು ಮೂರು ವರ್ಷ ಕಳೆದರೂ ಕಾಮಗಾರಿ ಆರಂಭವಾಗದ ಹಿನ್ನೆಲೆಯಲ್ಲಿ ಮೀನುಗಾರರು ಆತಂಕ ಇಮ್ಮಡಿಗೊಂಡಿದೆ.

ಇನ್ನೇನು 15-20 ದಿನಗಳಲ್ಲಿ ಕಡಲಿನಲ್ಲಿ ತೂಫಾನ್ ಆರಂಭವಾಗುವ ನಿರೀಕ್ಷೆಯಿದ್ದು, ಕಡಲತಡಿಯಲ್ಲಿ ನೆಲೆಸಿರುವ ಮೀನುಗಾರರಲ್ಲಿ ತಳಮಳ ಆರಂಭವಾಗಿದೆ. ಕಳೆದ ವರ್ಷ ತೌಖ್ತೆ ಚಂಡಮಾರುತ ಪರಿಣಾಮ ಮರವಂತೆಯ ಸುಮಾರು ಒಂದು ಕಿ.ಮೀ.ನಷ್ಟು ಉದ್ದದ ಕಡಲತೀರ ಅಲೆಗಳ ಅಬ್ಬರಕ್ಕೆ ನಲುಗಿ ಹೋಗಿತ್ತು. ಈ ಭಾಗದ ಪ್ರಮುಖ ಸಂಪರ್ಕ ರಸ್ತೆ ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿಹೋಗಿತ್ತು. ನೂರಾರು ಮರಗಳು ಕಡಲ ಪಾಲಾಗಿದ್ದಲ್ಲದೆ, ಅಪಾರ ಆಸ್ತಿಪಾಸ್ತಿ ನಷ್ಟ ಸಂಭವಿಸಿತ್ತು. ಕಡಲ ತೀರದಲ್ಲಿರುವ ಅನೇಕ ಮನೆಗಳು ಕಡಲ ಅಲೆಗಳ ಅಬ್ಬರಕ್ಕೆ ಸಮುದ್ರ ಪಾಲಾಗುವ ಭೀತಿ ಕೂಡ ಎದುರಾಗಿತ್ತು. ಈ ಬಾರಿ ಕೂಡ ಇದೇ ಪರಿಸ್ಥಿತಿ ಉದ್ಭವವಾಗುವ ಸಾಧ್ಯತೆ ಇದೆ. ಈ ವರ್ಷ ಮಳೆಗಾಲದಲ್ಲಿ ಸಮುದ್ರದಲ್ಲಿ ಚಂಡಮಾರುತ ಏಳುವ ಸಾಧ್ಯತೆಗಳಿದ್ದು, ತೀರ ನಿವಾಸಿಗಳು ಮತ್ತಷ್ಟು ಆತಂಕಿತರಾಗಿದ್ದಾರೆ.

ಮೀನುಗಾರಿಕೆ ಅಸಾಧ್ಯ

2011ರಲ್ಲಿ ಆರಂಭಗೊಂಡಿದ್ದ ಮರವಂತೆ ಔಟ್‌ಡೋರ್ ಬಂದರು ನಿರ್ಮಾಣ ಕಾಮಗಾರಿ ಈವರೆಗೆ ಪೂರ್ಣಗೊಳ್ಳದಿರುವುದು ಹಾಗೂ ಎರಡನೇ ಹಂತದ ಕಾಮಗಾರಿ ಈವರೆಗೆ ಪ್ರಾರಂಭಿಸದಿರುವುದು ಸ್ಥಳೀಯ ಮೀನುಗಾರರ ಅಸಮಾಧಾನಕ್ಕೆ ಕಾರಣವಾಗಿದೆ. ಅಪೂರ್ಣ ಕಾಮಗಾರಿಯಿಂದ ಮೀನುಗಾರರ ಮನೆ, ಸೊತ್ತುಗಳು ಸಮುದ್ರ ಪಾಲಾಗುವ ಭೀತಿ ಎದುರಾಗಿದೆ. ಮಳೆಗಾಲದಲ್ಲಿ ತೂಫಾನ್ ಆರಂಭವಾದರೂ ಮೀನುಗಾರರಿಗೆ ಮೀನುಗಾರಿಕೆಗೆ ತೆರಳು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣಗೊಂಡಿದೆ. 4ರಿಂದ 5 ಸಾವಿರ ಮೀನುಗಾರರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಮೀನುಗಾರರು ಬೀದಿಗೆ ಬರುವ ಸಾಧ್ಯತೆಗಳಿವೆ. ಕಳೆದ ವರ್ಷದ ಚಂಡಮಾರುತದ ಪರಿಸ್ಥಿತಿ ಗಮನಿಸಿದರೆ ಮೈಯಲ್ಲಿ ನಡುಕ ಆರಂಭವಾಗುತ್ತದೆ ಎನ್ನುತ್ತಾರೆ ಸ್ಥಳೀಯ ಮೀನುಗಾರರು.

ಕಡಲ್ಕೊರೆತಕ್ಕಿಲ್ಲ ಶಾಶ್ವತ ಪರಿಹಾರ

ಮರವಂತೆಯಲ್ಲಿ ಪ್ರತಿವರ್ಷ ಕಂಡುಬರುತ್ತಿರುವ ಕಡಲ್ಕೊರೆತ ತಡೆಯಲು ಯಾವುದೇ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ಬೇರೆ ಬೇರೆ ಮಾದರಿಯ ತಡೆಗೋಡೆ ನಿರ್ಮಾಣ ಮಾಡುವ ಭರವಸೆ ನೀಡಿದ್ದ ಸರ್ಕಾರಗಳು ಇದೀಗ ಮೌನಕ್ಕೆ ಶರಣಾಗಿವೆ. ಶಾಶ್ವತ ತಡೆಗೋಡೆ ನಿರ್ಮಿಸಿ ಈ ಭಾಗದ ಜನರಿಗೆ ಜೀವನ ಭದ್ರತೆ ಕಲ್ಪಿಸಲು ಸರ್ಕಾರ ಹಿಂದೇಟು ಹಾಕುತ್ತಿರುವುದು ತೀರ ನಿವಾಸಿಗಳ ಆಕ್ರೋಶಕ್ಕೆ ತುತ್ತಾಗಿದೆ. ಬಂದರಿನ ಮೊದಲನೇ ಹಂತದ ಕಾಮಗಾರಿಯನ್ನು ಮೂಲ ವಿನ್ಯಾಸದಂತೆ ಕೈಗೊಳ್ಳದೆ ಕಾಮಗಾರಿ ನಿಲ್ಲಿಸಿದ ಪರಿಣಾಮ ಬಂದರಿನ ದಕ್ಷಿಣ ಭಾಗದಲ್ಲಿ ಮರಳು ಶೇಖರಣೆಯಾಗುತ್ತಿದೆ. ಈ ಭಾಗದಲ್ಲಿ ದೋಣಿಗಳನ್ನು ಲಂಗರು ಹೂಡಲು ಸಮಸ್ಯೆ ಆಗುತ್ತಿದೆ. ಮಳೆಗಾಲದಲ್ಲಿ ಕಡಲ ಉಬ್ಬರ ಮತ್ತು ಬಿರುಗಾಳಿಗೆ ಸಿಲುಕಿ ಅಪೂರ್ಣವಾಗಿದ್ದ ತಡೆಗೋಡೆಗಳು ಕುಸಿತಕ್ಕೊಳಗಾಗುತ್ತಿದೆ. ಮರವಂತೆ ಭಾಗದ ಮೀನುಗಾರರ ಸಮಸ್ಯೆಗಳನ್ನು ಪರಿಹಾರ ಮಾಡುವಂತೆ ರಾಜ್ಯದ ಮುಖ್ಯಮಂತ್ರಿಗಳು, ಇಲಾಖೆ ಸಚಿವರು ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ನೀಡಿದ ಮನವಿಗೆ ಯಾವುದೇ ಸ್ಪಂದನೆ ದೊರಕಿಲ್ಲ. ಮೀನುಗಾರರ ಸಮಸ್ಯೆಗಳಿಗೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ ಎಂಬ ಆಕ್ರೋಶದ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ.

ಮರವಂತೆ ಔಟ್‌ಡೋರ್ ಬಂದರು ಅಪೂರ್ಣ ಕಾಮಗಾರಿಯಿಂದ ಮೀನುಗಾರರ ಮನೆ, ಸೊತ್ತುಗಳು ಸಮುದ್ರ ಪಾಲಾಗುವ ಭೀತಿ ಎದುರಾಗಿದೆ. ಉದ್ಯೋಗ ಇಲ್ಲದೆ ಮೀನುಗಾರರು ಬೀದಿಗೆ ಬರುವ ಸಾಧ್ಯತೆಗಳಿವೆ. ಕಡಲ್ಕೊರೆತ ತಡೆಯಲು ಯಾವುದೇ ಶಾಶ್ವತ ಕಾಮಗಾರಿ ನಡೆದಿಲ್ಲ. ಮಳೆಗಾಲದಲ್ಲಿ ಕಡಲ ಉಬ್ಬರ ಮತ್ತು ಬಿರುಗಾಳಿಗೆ ಸಿಲುಕಿ ಅಪೂರ್ಣವಾಗಿದ್ದ ತಡೆಗೋಡೆ ಕುಸಿತಕ್ಕೊಳಗಾಗುವ ಸಾಧ್ಯತೆ ಇದ್ದು, ಮರವಂತೆ ಬಂದರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗುತ್ತಿದೆ.- ಶ್ರೀಧರ ಖಾರ್ವಿ, ಸ್ಥಳೀಯ ಮೀನುಗಾರರು ಮರವಂತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net