

ಕಾರವಾರ:ಉತ್ತರ ಕನ್ನಡ ಕರಾವಳಿಯಲ್ಲಿ ವಾಣಿಜ್ಯ ಬಂದರುಗಳ ನಿರ್ಮಾಣ ಹಾಗೂ ವಿಸ್ತರಣೆಯನ್ನು ವಿರೋಧಿಸಿದ್ದ ಮಂಕಾಳ ವೈದ್ಯ ಇಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾಗಿದ್ದಾರೆ.
ಈಗ ಬಂದರುಗಳ ಭವಿಷ್ಯ ಏನಾಗಲಿದೆ ಎಂಬ ಅಚ್ಚರಿ ಮೂಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೊನ್ನಾವರ ಕಾಸರಕೋಡಿನಲ್ಲಿ ಖಾಸಗಿ ಬಂದರು ನಿರ್ಮಾಣ ಹಾಗೂ ಕಾರವಾರದ ವಾಣಿಜ್ಯ ಬಂದರು ವಿಸ್ತರಣೆ ಯೋಜನೆಗಳು ಚುರುಕುಗೊಂಡಿದ್ದವು.
ಆದರೆ, ಮೀನುಗಾರರು ಯೋಜನೆಗಳ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದರು. ಆಗಿನ ಬಿಜೆಪಿ ಸರ್ಕಾರ ಮೀನುಗಾರರ ಪ್ರತಿರೋಧವನ್ನು ಲೆಕ್ಕಿಸದೇ ಮುಂದುವರಿಯಿತು ಎಂಬ ಬೇಸರದಿಂದ ಮೀನುಗಾರರು ಸದ್ಯ ಕಾನೂನು ಹೋರಾಟ ನಡೆಸಿದ್ದಾರೆ.
ಟೊಂಕ ಮೀನುಗಾರರಲ್ಲಿ ಭರವಸೆ:
ಆಗ ನಡೆದ ಬಂದರು ವಿರೋಧಿ ಹೋರಾಟಗಳಿಗೆ ಮಂಕಾಳ ವೈದ್ಯ ಬೆಂಬಲ ಸೂಚಿಸಿದ್ದರು. ಸ್ವತಃ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದರು. ಈಗ ಸ್ವತಃ ಮಂಕಾಳ ವೈದ್ಯ ಅವರೇ ಸಚಿವರಾಗಿರುವುದರಿಂದ ಮೀನುಗಾರರಲ್ಲಿ ತಮ್ಮ ಹೋರಾಟಕ್ಕೆ ಫಲ ಸಿಗುವ ಭರವಸೆ ಮೂಡಿದೆ.
"ಮಂಕಾಳ ವೈದ್ಯ ಅವರು ಸಚಿವರಾದ ನಂತರ ಡಾ.ಪ್ರಕಾಶ ಮೇಸ್ತ, ಗಣಪತಿ ತಾಂಡೇಲ, ರಾಜು ತಾಂಡೇಲ ಹಾಗೂ ಇತರರು ನಿಯೋಗ ತೆರಳಿ ಅವರನ್ನು ಭೇಟಿಯಾಗಿದ್ದೇವೆ. ಸಮಸ್ಯೆ, ನಮ್ಮ ಬೇಡಿಕೆ ಹೇಳಿಕೊಂಡಿದ್ದೇವೆ. ಸಚಿವರು ಸಮಸ್ಯೆ ಬಗೆಹರಿಸಿ ಮೀನುಗಾರರ, ಸ್ಥಳೀಯರ ಪರ ನಿಲ್ಲುವ ಭರವಸೆ ನೀಡಿದ್ದಾರೆ.' ಎಂಬುದು ಟೊಂಕದ ಮೀನುಗಾರರ ಮುಖಂಡ ರಾಜು ತಾಂಡೇಲ ಹೇಳುತ್ತಾರೆ.
ಸಾಗರಮಾಲಾ ಅಂಕೋಲಾಕ್ಕೆ..?
2019-20 ರಲ್ಲಿ ಕಾರವಾರ ವಾಣಿಜ್ಯ ಬಂದರು ವಿಸ್ತರಣೆ ವಿರೋಧಿಸಿ ನಡೆದ ಹೋರಾಟಗಳಲ್ಲಿ ಸತೀಶ ಸೈಲ್ ಪಾಲ್ಗೊಂಡು ಬೆಂಬಲ ಸೂಚಿಸಿದ್ದರು. ಈಗ ಆವರೂ ಶಾಸಕರಾಗಿ ಅಧಿಕಾರಕ್ಕೆ ಬಂದಿದ್ದಾರೆ.
"ಸತೀಶ ಸೈಲ್ ಹಾಗೂ ಮಂಕಾಳ ವೈದ್ಯ ಇಬ್ಬರೂ ಸೇರಿ ಸಾಗರ ಮಾಲಾ ಯೋಜನೆಯ ವಿರುದ್ಧ ಮೀನುಗಾರರ ಹೋರಾಟಕ್ಕೆ ಬೆಂಬಲ ನೀಡಿ ಅದನ್ನು ತಡೆಯುತ್ತಾರೆ ಎಂಬ ವಿಶ್ವಾಸ ನಮಗಿದೆ" ಎನ್ನುತ್ತಾರೆ. ಕಾರವಾರದ ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ.
ಈ ನಡುವೆ ಕಳೆದವಾರ ಕಾರವಾರದಲ್ಲಿ ಸಭೆ ನಡೆಸಿದ್ದ ಮಂಕಾಳ ವೈದ್ಯ ಅವರು, ಕಾರವಾರ ಬಂದರು ವಿಸ್ತರಣೆ ಯೋಜನೆಯನ್ನು ಅಂಕೋಲಾಕ್ಕೆ ಸ್ಥಳಾಂತರಿಸುವ ಬಗ್ಗೆ ಮಾತನಾಡಿದ್ದಾರೆ.
ಕಾರವಾರ ವಾಣಿಜ್ಯ ಬಂದರು ವಿಸ್ತಣೆಗೆ ಮಂಜೂರಾದ ಹಣ ಬಳಕೆಯಾಗದೇ ವಾಪಸಾಗುವುದು ಬೇಡ. ಅದನ್ನು ಅಂಕೋಲಾಕ್ಕೆ ಸ್ಥಳಾಂತರ ಮಾಡಲು ಅವಕಾಶವಿರುವ ಬಗ್ಗೆ ಪರಿಶೀಲನೆ ನಡೆಸಿ ಎಂದು ಬಂದರು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದಾರೆ. ಬಂದರು ಇಲಾಖೆ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದ್ದು, ಬಂದರು ವಿಸ್ತರಣೆ ಭವಿಷ್ಯ ಏನಾಗಲಿದೆ ಕಾದು ನೋಡಬೇಕಿದೆ.
ಇನ್ನೂ ಕೆಲ ಬಂದರು
ಸಾಗರ ಮಾಲಾ ಯೋಜನೆಯಲ್ಲಿ ಕಾರವಾರ ಮಾತ್ರವಲ್ಲ ಇನ್ನೂ ಕೆಲವು ಬಂದರು ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಖಾಸಗಿ ಸಹಭಾಗಿತ್ವದಲ್ಲಿ ಅಂಕೋಲಾದ ಕೇಣಿ ಕೇಣಿಯಲ್ಲಿ ಬಂದರು ನಿರ್ಮಾಣದ ಬಗ್ಗೆ ಯೋಜನೆ ರೂಪುಗೊಂಡಿದೆ. ಬೇಲೆಕೇರಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣದ ಬಗ್ಗೆಯೂ ಚರ್ಚೆಯಿದ್ದು, ಈ ಬಗ್ಗೆ ಕರ್ನಾಟಕ ಸರ್ಕಾರದ ನಿರ್ಧಾರಗಳ ಬಗ್ಗೆ ಈಗ ಕುತೂಹಲವಿದೆ.
ನ್ಯಾಯಾಲಯದಲ್ಲಿ
ಹೆಜ್ಜೆ ಗುರುತು
ನಾವು ಜನಪರವಾಗಿದ್ದೇವೆ. ಸ್ಥಳೀಯರಿಗೆ ಬೇಡ ಎಂದರೆ ನಾವು ಅಂಥ ಯೋಜನೆಯನ್ನು ಕೈಗೆತ್ತಿಕೊಳ್ಳುವುದಿಲ್ಲ. ಜನರ ಜತೆ ಚರ್ಚಿಸಿ, ಸಾಧಕ ಬಾಧಕ ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.ಮಂಕಾಳ ಎಸ್.ವೈದ್ಯಜಿಲ್ಲಾ ಉಸ್ತುವಾರಿ ಸಚಿವ