

ಉಡುಪಿ: ಜಿಲ್ಲೆಯ ಮೀನುಗಾರಿಕಾ ಚಟುವಟಿಕೆ ನಡೆಯುವ ಬಂದರುಗಳಲ್ಲಿ ಶುಚಿತ್ವಕ್ಕೆ ಹಾಗೂ ಸುರಕ್ಷತೆಗೆ ಆದ್ಯತೆ ನೀಡಬೇಕು. ಯಾವುದೇ ಅವಘಡಗಳು ನಡೆಯದಂತೆ ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸೂಚನೆ ನೀಡಿದರು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಬಂದರು ನಿರ್ವಹಣಾ ಮೇಲುಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೀನುಗಾರಿಕಾ ಜಟ್ಟಿಗಳ ನಿರ್ವಹಣೆಗೆ ಗುತ್ತಿಗೆಯನ್ನು ನೀಡಲಾಗಿದ್ದು, ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುವುದರೊಂದಿಗೆ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಬೇಕು ಹಾಗೂ ಅಗ್ನಿ ಅವಘಡಗಳು ಆಗದಂತೆ ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ತಿಳಿಸಿದರು.
ಮೀನುಗಾರಿಕಾ ಚಟುವಟಿಕೆಗಳಿಗೆ ಪೂರಕವಾಗಿ ಬರುವಂತಹ ವಾಹನಗಳಿಂದ ಮಾತ್ರ ಪಾರ್ಕಿಂಗ್ ಶುಲ್ಕವನ್ನು ಪಡೆಯಬೇಕು. ಇತರ ಸಾರ್ವಜನಿಕ ಸಂಚಾರಿ ವಾಹನಗಳಿಂದ ಶುಲ್ಕವನ್ನು ಪಡೆಯಬಾರದೆಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಮರದ ಬೋಟುಗಳನ್ನು ನಿಮಾರ್ಣ ಮಾಡಲು ಅನುಮತಿಯನ್ನು ನೀಡಲಾಗಿದೆ. ಆದರೆ, ಕೆಲವರು ರಾಸಾಯನಿಕಗಳ ಬಳಕೆಯೊಂದಿಗೆ ಯಾಂತ್ರೀಕೃತ ದೋಣಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕೆಂದು ಸೂಚನೆ ನೀಡಿದರು.
ಗಂಗೊಳ್ಳಿ ಬಂದರಿನಲ್ಲಿ ಅಗ್ನಿ ಶಾಮಕ ಉಪಠಾಣೆ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅಗ್ನಿ ನಂದಿಸಲು ಅಗತ್ಯವಿರುವ ಆಧುನಿಕ ವಾಹನದ ಖರೀದಿಗೆ ಕ್ರಿಯಾಯೋಜನೆ ಸಲ್ಲಿಸಬೇಕು ಎಂದು ಸೂಚನೆ ನೀಡಿದರು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ, ಬಂದರು ಇಲಾಖೆಯ ಅಭಿಯಂತರರು ಉಪಸ್ಥಿತರಿದ್ದರು.