

ಕೊಪ್ಪಳ: ವಿಶ್ವದಲ್ಲಿ ಜನಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಡಿಎಚ್‌ಒ ಡಾ.ಟಿ.ಲಿಂಗರಾಜು ಹೇಳಿದರು.
ನಗರದ ನಗರ ಕೇಂದ್ರ ಆರೋಗ್ಯ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಜ್ಞಾನ, ಮೂಢನಂಬಿಕೆ, ಅನಕ್ಷರತೆ, ಬಾಲ್ಯವಿವಾಹ, ಜನಿಸುವ ಮಕ್ಕಳ ಮಧ್ಯೆ ಅಂತರವಿಲ್ಲದಿರುವುದು, ಗಂಡು ಮಗು ಬೇಕೆಂಬ ಹಂಬಲ ಜನಸಂಖ್ಯೆ ಹೆಚ್ಚಳಕ್ಕೆ ಕಾರಣ. ಜನಸಂಖ್ಯೆ ಹೆಚ್ಚಳದಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ಕುಟುಂಬ ಯೋಜನೆ ಅಳವಡಿಸಿಕೊಳ್ಳಬೇಕು. ಸರ್ಕಾರ ನಿಗದಿಪಡಿಸಿದ ವಯಸ್ಸಿಗೆ ಮದುವೆ ಮಾಡಬೇಕು. ಉತ್ತಮ ಶಿಕ್ಷಣ ಕೊಡಿಸಬೇಕು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ. ತಾತ್ಕಾಲಿಕ ಕುಟುಂಬ ಯೋಜನೆ ಅಳವಡಿಸಿಕೊಳ್ಳಬೇಕು. ಜನಸಂಖ್ಯೆ ಸ್ಥಿರತೆಗೆ ಜಾಗೃತಿ ಅವಶ್ಯ ಎಂದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರವೀಂದ್ರನಾಥ್ ಎಂ.ಎಚ್.ಮಾತನಾಡಿ, ಪ್ರತಿ ವರ್ಷ ಜು.11ರಂದು ವಿಶ್ವ ಜನಸಂಖ್ಯೆ ದಿನಾಚರಣೆ ಮಾಡಲಾಗುತ್ತದೆ. ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಎಂಬ ಗಾಧೆ ಎಲ್ಲರೂ ಪಾಲಿಸಬೇಕು. ದಂಪತಿ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಕನಿಷ್ಠ 3 ವರ್ಷ ಅಂತರ ಕಾಪಾಡಬೇಕು. ಕುಟುಂಬ ಕಲ್ಯಾಣ ಕಾರ್ಯಕ್ರಮದ ತಾತ್ಕಾಲಿಕ ಹೊಸ ಹೊಸ ವಿಧಾನಗಳನ್ನು ಬಳಸಬೇಕು ಎಂದು ತಿಳಿಸಿದರು.
ತಾಲೂಕಾ ಆರೋಗ್ಯಾಧಿಕಾರಿ ಡಾ.ರಾಮಾಂಜನೇಯ ಮಾತನಾಡಿ, ಜನಸಂಖ್ಯೆ ಸ್ಫೋಟದಿಂದ ಹಲವು ಸಮಸ್ಯೆಗಳು ಉಂಟಾಗುತ್ತವೆ. ಜನಸಂಖ್ಯೆಯಲ್ಲಿ ನಮ್ಮ ದೇಶ ಮೊದಲ ಸ್ಥಾನದಲ್ಲಿದೆ. ಬಾಲ್ಯವಿವಾಹ ತಡೆಗಟ್ಟುವುದು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವುದು, ಮೂಢನಂಬಿಕೆಗಳಿಂದ ಹೊರಬರಬೇಕಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಪ್ರಕಾಶ, ಡಾ.ಶಶಿಧರ, ಡಾ.ನಂದಕುಮಾರ್, ಡಾ.ವೆಂಕಟೇಶ, ಡಾ.ರಮೇಶ, ಡಾ.ಗೀತಾ, ಡಾ.ಮಹೇಶ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಇತರರಿದ್ದರು.