

ನರಗುಂದ: ನಮ್ಮ ದೇಶದ ಜನಸಂಖ್ಯೆ ವಿಶ್ವದಲ್ಲೇ ಮೊದಲನೆಯ ಸ್ಥಾನದಲ್ಲಿದೆ. ಅಭಿವೃದ್ಧಿಯ ಹಿತದೃಷ್ಟಿಯಿಂದ ಇದು ಆರೋಗ್ಯಕರ ಬೆಳವಣಿಗೆ ಅಲ್ಲ. ಸಂತೋಷ ಮತ್ತು ಸಮೃದ್ಧಿಯ ಜೀವನಕ್ಕಾಗಿ ಪ್ರತಿಯೊಬ್ಬರೂ ಕುಟುಂಬ ಯೋಜನೆ ಆಯ್ಕೆ ಮಾಡಿಕೊಳ್ಳುವ ಪ್ರತಿಜ್ಞೆ ಮಾಡಬೇಕು ಎಂದು ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಪುಷ್ಪಾ ಪಾಟೀಲ ಹೇಳಿದರು.
ಪಟ್ಟಣದ ಶ್ರೀ ಸಿದ್ಧೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಾಬಾಸಾಹೇಬ ಭಾವೆ ಸರ್ಕಾರಿ ತಾಲೂಕು ಆಸ್ಪತ್ರೆ, ಜಿಲ್ಲಾ ಮಾಹಿತಿ ಶಿಕ್ಷಣ ಮತ್ತು ಸಂಪರ್ಕ ಅಧಿಕಾರಿಗಳ ಕಾರ್ಯಾಲಯ, ಶ್ರೀಸಿದ್ಧೇಶ್ವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೇಶದ ಜನಸಂಖ್ಯೆ ಸ್ಫೋಟವಾಗಿ ಬೆಳೆಯಲು ಗಂಡು- ಹೆಣ್ಣು ಇಬ್ಬರು ಪ್ರಮುಖ ಕಾರಣರಾಗಿದ್ದಾರೆ. ಸುಸ್ಥಿರ ಸಮಾಜ ನಿರ್ಮಾಣ ಮಾಡುವುದು ಕಷ್ಟಕರವಾಗಿದೆ. ಈ ಬಗ್ಗೆ ವಿದ್ಯಾವಂತರು, ಪ್ರಜ್ಞಾವಂತ ನಾಗರಿಕರು ತಿಳಿದುಕೊಂಡು ಜನಸಂಖ್ಯೆ ನಿಯಂತ್ರಣಕ್ಕೆ ಕೈಜೋಡಿಸಬೇಕು ಎಂದರು.
ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ವಿ.ಕೊಣ್ಣೂರ ಮಾತನಾಡಿ, ಭಾರತದಲ್ಲಿ ಪ್ರತಿ ವರ್ಷಕ್ಕೆ 1.66 ಕೋಟಿ ಮಕ್ಕಳು ಜನಿಸುತ್ತಾರೆ. ಸ್ವಾತಂತ್ರೃ ಪೂರ್ವದಲ್ಲಿ 34 ಕೋಟಿ ಇದ್ದ ಜನಸಂಖ್ಯೆ ಇಂದು 142 ಕೋಟಿ ತಲುಪಿದೆ. ಜನಸಂಖ್ಯೆ ಸ್ಫೋಟದಿಂದ ಆಹಾರ, ನೀರು, ಬಟ್ಟೆ, ವಸತಿ, ಖನಿಜಗಳ ಕೊರತೆ. ಶಿಕ್ಷಣ, ಆರೋಗ್ಯ ಸೇವೆಗಳು ಮತ್ತು ಸಂಪನ್ಮೂಲಗಳ ಕೊರತೆ, ಸಾಮಾಜಿಕ ಅಸಮಾನತೆ, ಕೊಳಚೆ ಪ್ರದೇಶಗಳ ಉಲ್ಬಣ, ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತವೆ ಎಂದರು.
ಡಾ. ಪಂಕಜಾ ಮೈತ್ರಿ, ಶಿಶು ಅಭಿವೃದ್ಧಿ ಅಧಿಕಾರಿ ರೂಪಾ ಗಂಧದ, ಐ.ಎಫ್. ಸೌದಾಗರ ಮಾತನಾಡಿದರು. ಪಿ.ಎಸ್. ಅಣ್ಣಿಗೇರಿ, ಎಂ.ಎಫ್. ವಡೇಕಾರ, ಬಿ.ಡಿ. ಕೊಣ್ಣೂರ, ಸಿ.ಎಫ್. ಕುಂಬಾರ, ಶಿವಾನಂದ ಕುರಹಟ್ಟಿ, ನೀಲಕಂಠ ಮಡಿವಾಳರ, ಬಸವಾರಜ ಕೌಜಗೇರಿ, ಎಂ.ಎಂ. ಮಸೂತಿಮನಿ, ಇತರರಿದ್ದರು. ಸುಧಾ ಮೊರಬದ, ದಿವ್ಯಾ ದೊಡ್ಡಮನಿ ನಿರ್ವಹಿಸಿದರು.