

ಬೆಳಗಾವಿ: ಜಿಲ್ಲೆಯಲ್ಲಿ ಕರೊನಾ ವೈರಸ್ ಮೂರು ಪ್ರಕರಣ ದೃಢಪಟ್ಟಿರುವುದರಿಂದ ಇನ್ನಷ್ಟು ಕಟ್ಟುನಿಟ್ಟಾಗಿ ಲಾಕ್‌ಡೌನ್ ಪಾಲಿಸಬೇಕು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ನಾಗರಿಕರಿಗೆ ಅಗತ್ಯ ಸಾಮಗ್ರಿಗಳ ಪೂರೈಕೆ ಮತ್ತು ತುರ್ತು ಸಂದರ್ಭ ಹೊರತುಪಡಿಸಿ, ಉಳಿದಂತೆ ಜನಸಂಚಾರ ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಒಮ್ಮೆ ನೆಗೆಟಿವ್ ವರದಿ ಬಂದಿರುವವರನ್ನು ಕೆಲ ದಿನಗಳ ಬಳಿಕ ಮತ್ತೊಮ್ಮೆ ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಅದೇ ರೀತಿ ನಗರ ಪ್ರದೇಶಗಳಲ್ಲಿಯೂ ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಗೋಕಾಕದಲ್ಲಿ ಈಗಾಗಲೇ ಎಲ್ಲ ಜಮಾತ್‌ಗಳ ಪ್ರತಿನಿಧಿಗಳ ಸಭೆ ನಡೆಸಿ
ಲಾಕ್‌ಡೌನ್ ಪಾಲಿಸುವ ಅಗತ್ಯತೆ ಬಗ್ಗೆ ಮನವರಿಕೆ ಮಾಡಲಾಗಿದೆ ಎಂದರು.
ಎಲ್ಲೆಡೆ ನಿಗಾ ವಹಿಸಿ: ಔಷಧ ಸಾಮಗ್ರಿಗಳ ಲಭ್ಯತೆ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವ ರಮೇಶ, ನಗರದ ಹೊರವಲಯದಲ್ಲಿ ನಾಲ್ಕು ಕಡೆ ಹೋಲ್‌ಸೇಲ್ ತರಕಾರಿ ಮಾರುಕಟ್ಟೆ ಸ್ಥಾಪನೆ ಹಾಗೂ ಮೂಲ ಸೌಕರ್ಯ ಒದಗಿಸಿರುವ ಬಗ್ಗೆ ಚರ್ಚೆ ನಡೆಸಿದರು. ರಾಯಬಾಗ, ಚಿಕ್ಕೋಡಿ, ಕುಡಚಿ ಸೇರಿ ವಿವಿಧೆಡೆಯ ಮಾಹಿತಿ ಪಡೆದುಕೊಂಡು, ಜಿಲ್ಲೆಯ ಎಲ್ಲ ಭಾಗಗಳ ಮೇಲೆ ನಿಗಾ ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.
ಕಾನೂನು ಸುವ್ಯವಸ್ಥೆ ಪಾಲನೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಸಚಿವರಿಗೆ ಮಾಹಿತಿ ನೀಡಿದರು. ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ವಿ. ರಾಜೇಂದ್ರ ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.
ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿ, ಕ್ವಾರಂಟೈನ್‌ಗಾಗಿ ವಿವಿಧೆಡೆ ವಸತಿ ಗೃಹ ಗುರುತಿಸಲಾಗಿದೆ ಎಂದು ತಿಳಿಸಿದರು. ಬಿಮ್ಸ್ ನಿರ್ದೇಶಕ ಡಾ. ವಿನಯ ದಾಸ್ತಿಕೊಪ್ಪ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ವಿ. ಮುನ್ಯಾಳ ಮಾತನಾಡಿ, ಸರ್ಕಾರದ ಮಾರ್ಗಸೂಚಿ ಪ್ರಕಾರ ಕ್ವಾರಂಟೈನ್‌ನಲ್ಲಿ ಇರುವವರ ತಪಾಸಣೆ ಸೇರಿ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.