

ಬೆಟ್ಟದಪುರ: ಒಂದು ದೇಶವು ಪ್ರಗತಿಯಾಗಬೇಕಾದರೆ ಅದಕ್ಕೆ ಮಾನವ ಸಂಪನ್ಮೂಲವು ಅತ್ಯಗತ್ಯ. ಆದರೆ ದೇಶವು ಅಭಿವೃದ್ಧಿಯಾಗುವ ಬದಲು ಜನಸಂಖ್ಯೆಯೇ ಹೆಚ್ಚಾದರೆ ಗಂಭೀರ ಸಮಸ್ಯೆಗಳು ಎದುರಾಗುತ್ತವೆ ಎಂದು ಭುವನಹಳ್ಳಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಲ್.ಎಂ.ಪೂಜಾ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಭುವನಹಳ್ಳಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಜಾಗತಿಕ ಜನಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಈ ಜನಸಂಖ್ಯೆ ಹೆಚ್ಚಳವು ಮನುಕುಲಕ್ಕೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಜನಸಂಖ್ಯಾ ಹೆಚ್ಚಳದಿಂದ ಪರಿಹರಿಸಲಾಗದ ಹಲವಾರು ತೊಂದರೆಗಳು ಇಡೀ ವಿಶ್ವಕ್ಕೆ ಎದುರಾಗುತ್ತವೆ ಎಂದರು.
ಆರೋಗ್ಯ ಸುರಕ್ಷಾಧಿಕಾರಿ ಕೆ.ಆರ್.ಶಶಿ ಮಾತನಾಡಿ, ಜನಸಂಖ್ಯೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಇದಕ್ಕಾಗಿ ಅರೋಗ್ಯ ಇಲಾಖೆಯೂ ಕೂಡ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಅರಿವು ಮೂಡಿಸುತ್ತಿದೆ. ಹೀಗೆ ಜನಸಂಖ್ಯೆ ಏರಿಕೆಯಾಗುತ್ತ ಹೋದರೆ ಜನಸಂಖ್ಯೆಯನ್ನು ನಿಯಂತ್ರಿಸುವುದು ಕಷ್ಟವಾಗುವುದಂತೂ ಖಂಡಿತ. ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜು. 11ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಪುನೀತ್‌ಕುಮಾರ್, ಆಶಾ ಕಾರ್ಯಕರ್ತೆಯರಾದ ಶೋಭಾ, ಯಶೋದಾ, ಸ್ಥಳೀಯರು ಇದ್ದರು.