

ಬನ್ನೂರು: ಆರಂಭದಲ್ಲಿ 35 ಲಕ್ಷ ರೂ. ಹೂಡಿಕೆಯಿಂದ ಆರಂಭವಾದ ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಉತ್ತಮವಾಗಿ ಸಾಗಿದ ಪರಿಣಾಮ 8 ಕೋಟಿ ರೂ.ಗೂ ಹೆಚ್ಚಿನ ವಹಿವಾಟು ನಡೆಸುತ್ತಿದೆ. ಜನರ ಸೇವೆಯ ದೃಷ್ಟಿಯಿಂದ ಲಾಭದಾಯಕವಲ್ಲದ ವಹಿವಾಟನ್ನು ಕೂಡ ನಡೆಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ವೈ.ಎನ್.ಶಂಕರೇಗೌಡ ತಿಳಿಸಿದರು.
ಸಂಘದ ಆವರಣದಲ್ಲಿ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಸಂಘದ ಎಲ್ಲ ಸಹಕಾರಿಗಳಿಂದ ಇಂದು ಸಹಕಾರಿ ಸಂಘ ಮಾದರಿಯಾಗಿ ರೂಪಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಕಾರ ಕ್ಷೇತ್ರಕ್ಕೆ ನೀಡುವ ಯಾವುದೇ ಸೌಲಭ್ಯಗಳಲ್ಲೂ ಅದನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರುವಲ್ಲಿ ಸಂಘ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ಹಳ್ಳಿಯ ವಿದ್ಯಾವಂತ ಮಕ್ಕಳು ಉದ್ಯೋಗಕ್ಕಾಗಿ ನಗರ ಪ್ರದೇಶದತ್ತ ಮುಖ ಮಾಡುವಂತಾಗಿದೆ. ಇದನ್ನು ತಪ್ಪಿಸಿ ಗ್ರಾಮೀಣ ಪ್ರದೇಶದಲ್ಲಿಯೇ ಯುವಕರಿಗೆ ಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ಕಾರ್ಯ ರೂಪಿಸಿಬೇಕು ಎಂದು ತಿಳಿಸಿದರು.
ಸಂಘದ ಕಾರ್ಯನಿರ್ವಹಣಾ ಅಧಿಕಾರಿ 2024-25ನೇ ಸಾಲಿನ ಆದಾಯ ವೆಚ್ಚವನ್ನು ಸಭೆಗೆ ಮಂಡಿಸಿ ಒಪ್ಪಿಗೆ ಪಡೆದರು.
ಇದೇ ಸಂದರ್ಭದಲ್ಲಿ ಸಂಘದಲ್ಲಿನ ಗ್ರಂಥಾಲಯವನ್ನು ಉಪಯೋಗಿಸಿಕೊಳ್ಳುತ್ತಿರುವವರನ್ನು ಸನ್ಮಾನಿಸಲಾಯಿತು. ಸುಮಾರು 30 ಸಾವಿರ ರೂ. ಬೆಲೆಯುಳ್ಳ ಪುಸ್ತಕವನ್ನು ಪಿಎಸಿಎಸ್ ಗ್ರಂಥಾಲಯಕ್ಕೆ ನೀಡಿದ ಪ್ರೀತಮ್ ಅವರನ್ನು ಸನ್ಮಾನಿಸಲಾಯಿತು.
ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ವೈ.ಎಂ.ಚಂದ್ರು, ವೈ.ಕೆ. ಬೋರೇಗೌಡ, ನಾಡ ಯಜಮಾನರಾದ ಹನುಮಂತೇಗೌಡ, ವೈ.ಜಿ.ಮಹೇಂದ್ರ, ದುರ್ಗೇಶ್, ನಂಜೇಗೌಡ, ವೈ.ಎ. ಪುಟ್ಟರಾಜು ಸೇರಿದಂತೆ ಪಿಎಸಿಎಸ್‌ನ ನಿರ್ದೇಶಕರು, ಸದಸ್ಯರು ಇದ್ದರು.