ಸಮಾಜ ಬದಲಾವಣೆಗೆ ಜನಪರ ಸಾಹಿತ್ಯ ಅಗತ್ಯ

18ald 2
Published on

ಆಲ್ದೂರು: ಜಗತ್ತಿಗೆ ಅನಂತ ಕಾಲ ಮಾದರಿಯಾಗಿ ನಿಲ್ಲಬಲ್ಲ ಸಾಹಿತ್ಯವೇ ಜನ ಸಾಹಿತ್ಯ. ಇಂತಹ ಜನ ಸಾಹಿತ್ಯ ಸಮಾಜದ ಬೌದ್ದಿಕ ಮಟ್ಟವನ್ನು ಮೇಲಕ್ಕೆ ಎತ್ತಿ ಜೀವನ ಪದ್ದತಿಯನ್ನು ಸರಳಗೊಳಿಸಿದೆ ಎಂದು ಕಸಾಪ ನಿಕಟಪೂರ್ವ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ ದಿಣ್ಣೆಕೆರೆ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ, ಮಹಿಳಾ ಘಟಕದಿಂದ ಹಮ್ಮಿಕೊಂಡಿದ್ದ ಶ್ರಾವಣ ಸಂಜೆಯಲ್ಲಿ ನುಡಿಸಿರಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಹಿತ್ಯದಲ್ಲಿ ಬೌದ್ಧಿಕತೆ ಹೊರ ಹೊಮ್ಮಿದ್ದರಿಂದ ಸಹಿಷ್ಣತೆ ಹಾಗೂ ಭಾತೃತ್ವ ನೋಡಲು ಸಿಗುತ್ತಿದೆ. ಮಡಿವಂತಿಕೆ ಸಾಹಿತ್ಯದಿಂದ ಸಮಾಜದ ಪರಿವರ್ತನೆ ಸಾಧ್ಯವಿಲ್ಲ. ಸಾಮಾಜಿಕ ಬದಲಾವಣೆಗೆ ಜನಪರ ಸಾಹಿತ್ಯದ ಅಗತ್ಯವಿದೆ ಎಂದರು.

ಸಮಾಜದಲ್ಲಿ ಇಂದು ಒಬ್ಬರ ಮಾತನ್ನು ಮತ್ತೊಬ್ಬರು ಕೇಳಿಸಿಕೊಳ್ಳುವ ಸಂಯಮ ಕಡಿಮೆಯಾಗಿದೆ. ಗೆಲ್ಲಲಾಗದ ಕೊಲ್ಲಲಾಗದ ಆಸೆಗಳ ಹಿಂದೆ ಈ ಸಮಾಜ ಜೋತು ಬಿದ್ದಿದೆ. ಯಾವುದೇ ಸ್ವ ಹಿತಾಸಕ್ತಿ ಇಲ್ಲದೆ ತೆರೆದುಕೊಳ್ಳುವುದು ಸಾಂಸ್ಕೃತಿಕ ಜೀವನ. ಇಂತಹ ಸಾಂಸ್ಕೃತಿಕ ಜೀವನವನ್ನು ಜನ ಸಾಹಿತ್ಯಗಳು ಕಟ್ಟಿಕೊಂಡಿವೆ. ಈ ಸಾಹಿತ್ಯದಿಂದಲೇ ಜನಪರ ಮತ್ತು ಜೀವಪರ ಚಿಂತನೆಗಳು ಹೊರಬರಲು ಸಾಧ್ಯವಾಗಿದೆ ಎಂದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಆಂಗ್ಲ ಮಾಧ್ಯಮ ಅನಿವಾರ್ಯ. ಆದರೆ ಸಂಬಂಧಗಳನ್ನು ಗಟ್ಟಿಗೊಳಿಸಲು ಮಾತೃ ಭಾಷೆಯಿಂದ ಮಾತ್ರ ಸಾಧ್ಯ. ಶತಮಾನಗಳಿಂದಲೂ ಕನ್ನಡವನ್ನು ಪೋಷಿಸುವ ಬೆಳಸುವ ಕೆಲಸ ನಡೆದಿದೆ. ಕನ್ನಡದ ಬೇರುಗಳು ಹಳ್ಳಿಗಳಲ್ಲಿ ಆಳವಾಗಿ ಬೇರೂರಿವೆ, ಹಳ್ಳಿ ಸಾಹಿತ್ಯದ ಸೊಗಡು ಎಂದಿಗೂ ತನ್ನ ಮೌಲ್ಯವನ್ನು ಕಳೆದುಕೊಂಡಿಲ್ಲ. ನಾವು ಎಷ್ಟು ಭಾಷೆ ಕಲಿತರೂ ಮಾತೃ ಭಾಷೆ ಕನ್ನಡವನ್ನು ಮರೆಯ ಬಾರದು ಎಂದರು.

ಪೂರ್ಣಪ್ರಜ್ಞಾಶಾಲೆಯ ವಿದ್ಯಾರ್ಥಿಗಳಾದ ಪ್ರದ್ಯುಮ್ನಶೆಟ್ಟಿ, ಪುಲಸ್ತ್ಯ ಶೆಟ್ಟಿ , ಪತ್ರಕರ್ತೆ ತನುಜ ರಾಜೇಶ್ ಅವರನ್ನು ಗೌರವಿಸಲಾಯಿತು. ಕಸಾಪ ಎಸ್ಸಿ ಘಟಕದ ಅಧ್ಯಕ್ಷ ನವರಾಜ್, ಮಾವಿನಕೆರೆ ದಯಾನಂದ್, ಸತೀಶ್,ಸಿಂಪನಾ, ಕೆಂಚಯ್ಯ, ಗಿರೀಶ್, ಪ್ರವೀಣ್, ಅಣ್ಣೆಗೌಡ, ವೆಂಕಟೇಶ್, ರಮೇಶ್ ಆಚಾರ್ಯ, ನೇತ್ರಾವತಿ, ಕಾಮಾಕ್ಷ್ಮಿ, ದೇವಿರಮ್ಮ, ಸರೋಜಾ, ಭಾಗ್ಯ, ದಾಕ್ಷಾಯಿಣಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net