ಜನಮನ ಸೆಳೆದ ಭಕ್ತಿ ಹಾಡು, ನೃತ್ಯ ರೂಪಕ

h12-ramakrishna 2
Published on

ಹುಬ್ಬಳ್ಳಿ: ಶರನ್ನವರಾತ್ರಿ ಉತ್ಸವ ನಿಮಿತ್ತ ಇಲ್ಲಿಯ ಕಲ್ಯಾಣ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಧಾರ್ಮಿಕ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಶನಿವಾರ ವಿಜೃಂಭಣೆಯಿಂದ ಜರುಗಿದವು.
ಹುಬ್ಬಳ್ಳಿಯ ಉದಯೋನ್ಮುಖ ಗಾಯಕ ಶಿವಸ್ವಾಮಿ ಹಿರೇಮಠ ಅವರು ಭಕ್ತಿ ಸಂಗೀತ ಸೇವೆ ನೀಡಿದರು. ಡಾ. ನಾಗಲಿಂಗ ಮುರಗಿ, ಶಬ್ಬೀರ ಧಾರವಾಡ ತಬಲಾ, ಪ್ರೇಮಕೃಷ್ಣ ಮೇಟಿ ಹಾರ್ಮೋನಿಯಂ, ಅರುಣ ಸಂಶಿ ತಾಳ ಸಾಥ್ ನೀಡಿದರು.
ಶಿವಸ್ವಾಮಿ ಹಿರೇಮಠ ಅವರು ಮೊದಲಿಗೆ ಛೋಟಾ ಖಯಾಲ ಹಾಡಿ, ನಂತರ ದೇವಿ ಸೇರಿದಂತೆ ವಿವಿಧ ದಾಸರ ಪದ ಹಾಗೂ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು.
ಸಂಜೆ ವೇಳೆ ವಂದೇ ಮಾತರಂ ಗುರುಕುಲದಿಂದ ಸ್ವಾಮಿ ವಿವೇಕಾನಂದರ ಹಾಗೂ ಭಾರತದ ಸ್ವಾತಂತ್ರ್ಯಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ‘ಭಾರತಾರ್ಪಣಮಸ್ತು’ ನೃತ್ಯ ರೂಪಕ ಜರುಗಿತು. ಇದನ್ನು ನೋಡಿದ ಪ್ರತಿಯೊಬ್ಬರಲ್ಲೂ ಕಣ್ಣೀರು ಜಿನುಗುಂತೆ ಮಾಡಿತು.
ವಿಸರ್ಜನೆ: ರಾಮಕೃಷ್ಣ ವಿವೇಕಾಂದ ಆಶ್ರಮದಲ್ಲಿ ಪ್ರತಿಷ್ಠಾಪಿಸಿರುವ ಕೋಲ್ಕತ್ತಾ ಮಾದರಿಯ ಶ್ರೀದೇವಿ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ಅ. 13ರಂದು ಜರುಗಲಿದೆ.
ಅಂದು ಬೆಳಗ್ಗೆ 7ಕ್ಕೆ ರುದ್ರಾಭಿಷೇಕ, 10ಕ್ಕೆ ಶ್ರೀ ಗಾಯತ್ರಿ ಹೋಮ, 11ಕ್ಕೆ ಕೃತಜ್ಞತಾ ಸಮರ್ಪಣೆ, ಸಂಜೆ 5ಕ್ಕೆ ಶ್ರೀದುರ್ಗಾ ಮಾತೆಯ ಭವ್ಯ ಮೆರವಣಿಗೆ ಹಾಗೂ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net