

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ) ಬಳಸಿ ತಯಾರಿಸಿದ ಗಣಪತಿ ಮೂರ್ತಿಗಳನ್ನು ಮಾರಾಟ ಮಾಡಬಾರದು ಎಂದು ಸರ್ಕಾರ ಆದೇಶಿಸಿದೆ. ಆದರೆ, ನಗರದಲ್ಲಿ ಕೆಲವರು ಪಿಒಪಿ ಗಣಪತಿ ಮೂರ್ತಿ ಮಾರಾಟಕ್ಕೆ ಮುಂದಾಗಿದ್ದು, ಸರ್ಕಾರದ ಆದೇಶವನ್ನು ಕಡೆಗಣಿಸಿರುವ ಆರೋಪ ಕೇಳಿಬಂದಿದೆ.
ರಾಣೆಬೆನ್ನೂರ ನಗರ ಮಾತ್ರವಲ್ಲದೆ ಕುಮಾರಪಟ್ಟಣ, ಹಾವೇರಿ, ಹಾನಗಲ್ಲ, ಬ್ಯಾಡಗಿ ಸೇರಿ ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ಕೆಲವರು ಪಿಒಪಿ ಮೂರ್ತಿ ತಯಾರಿಸಿ ಗೌಪ್ಯ ಸ್ಥಳದಲ್ಲಿ ಮಾರಾಟಕ್ಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕಾದ ಪರಿಸರ ಇಲಾಖೆ, ನಗರಸಭೆ ಅಧಿಕಾರಿಗಳು ಮೌನವಹಿಸಿರುವುದು ನೈಸರ್ಗಿಕ ಮೂರ್ತಿ ತಯಾರಿಸುವ ಕಲಾಕಾರರ ಆಕ್ರೋಶಕ್ಕೆ ಕಾರಣವಾಗಿದೆ.
ಪಿಒಪಿ ಗಣೇಶ ವಿಗ್ರಹ ನಿಷೇಧಿಸಿ ಸರ್ಕಾರ 5 ವರ್ಷದ ಹಿಂದೆಯೇ ಆದೇಶ ಹೊರಡಿಸಿದೆ. ಆರಂಭದಲ್ಲಿ ಪಿಒಪಿ ಮೂರ್ತಿ ಮಾರಾಟ ಕೊಂಚ ತಗ್ಗಿತ್ತು. ನಂತರದ ಎರಡು ವರ್ಷ ಪುಣೆ, ಮುಂಬೈನಿಂದ ತರಿಸಿಕೊಂಡು ಕದ್ದು ಮುಚ್ಚಿ ಮಾರಾಟ ಮಾಡಲಾಗುತ್ತಿತ್ತು. ಪ್ರಸಕ್ತ ವರ್ಷ ಮಾತ್ರ ನಗರದ ಅನೇಕ ಕಡೆಗಳಲ್ಲಿ ಸ್ಥಳೀಯವಾಗಿಯೆ ಪಿಒಪಿ ಮೂರ್ತಿ ತಯಾರಿಸಲಾಗುತ್ತಿದೆ. ಸ್ಥಳೀಯರಲ್ಲದ ಕೆಲವರು ಪುಣೆ, ಮುಂಬಯಿ ಸೇರಿ ಹೊರ ರಾಜ್ಯದ ಕೆಲವೆಡೆಯಿಂದ ನಗರಕ್ಕೆ ಬಂದು ಅಲ್ಲಲ್ಲಿ ಬಾಡಿಗೆ ಶೆಡ್ಗಳನ್ನು ಮಾಡಿಕೊಂಡು ಪಿಒಪಿ ಗಣಪತಿ ಮಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಸ್ಥಳೀಯ ಕೆಲ ಕಲಾಕಾರರೂ ಸಾಥ್ ನೀಡುತ್ತಿದ್ದಾರೆ ಎನ್ನಲಾಗಿದೆ.
ಇದರಿಂದ ಸ್ಥಳೀಯವಾಗಿ ಸಾಂಪ್ರದಾಯಿಕ ಗಣಪತಿ ಮೂರ್ತಿ ತಯಾರಿಸುವವರಿಗೆ ಆರ್ಥಿಕ ನಷ್ಟ ಉಂಟಾಗುವ ಜತೆಗೆ ಪರಿಸರದ ಮೇಲೂ ದುಷ್ಪರಿಣಾಮ ಬೀರಲಿದೆ. ಆದ್ದರಿಂದ ಪರಿಸರ ಇಲಾಖೆ ಹಾಗೂ ನಗರಸಭೆಯವರು ಕೂಡಲೇ ಸೂಕ್ತ ಕ್ರಮ ಕೈಗೊಂಡು ಪಿಒಪಿ ಗಣಪತಿ ತಯಾರಿಸುವುದನ್ನು ಸ್ಥಗಿತಗೊಳಿಸಬೇಕು ಎಂಬುದು ಸ್ಥಳೀಯ ಕಲಾಕಾರರ ಆಗ್ರಹವಾಗಿದೆ.
ನಾವು ತಿಂಗಳುಗಟ್ಟಲೇ ಮುಂಚಿತವಾಗಿ ಮಣ್ಣಿನ ಗಣಪತಿ ಮೂರ್ತಿ ತಯಾರಿಸಲು ಸಿದ್ಧತೆ ಮಾಡಿಕೊಂಡಿರುತ್ತೇವೆ. ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ನೈಸರ್ಗಿಕ ಬಣ್ಣ ಬಳಸುತ್ತೇವೆ. ಆದರೆ, ನಗರಸಭೆ, ಪರಿಸರ ಇಲಾಖೆಯವರು ಆರಂಭದಲ್ಲಿ ಪಿಒಪಿ ಗಣಪತಿ ನಿಷೇಧ ಎಂದು ಹೇಳಿ ಸ್ಥಳೀಯರಿಗೆ ಮಾರಾಟ ಮಾಡಲು ಅವಕಾಶ ನೀಡಲಿಲ್ಲ. ಆದರೆ, ಕೆಲವರು ಅಲ್ಲಲ್ಲಿ ರಾಜಾರೋಷವಾಗಿ ಪಿಒಪಿ ಗಣಪತಿ ಮಾಡುತ್ತಿದ್ದಾರೆ. ಅಂಥವರ ವಿರುದ್ಧ ಅಧಿಕಾರಿಗಳು ಯಾವುದೆ ಕ್ರಮ ಜರುಗಿಸುತ್ತಿಲ್ಲ. ಹೀಗಾದರೆ ನಿಜವಾದ ಕಲಾವಿದರು ಏನು ಮಾಡಬೇಕು? ಲಕ್ಷಾಂತರ ರೂ. ಬಂಡವಾಳ ಹಾಕಿ ಮಣ್ಣಿನಿಂದ ಮಾಡಿದ ಗಣಪತಿ ಮೂರ್ತಿಗಳನ್ನು ಏನು ಮಾಡಬೇಕು ಎಂದು ನೈಸರ್ಗಿಕ ಗಣಪತಿ ಮೂರ್ತಿ ತಯಾರಕರು ಅಳಲು ತೋಡಿಕೊಳ್ಳುತ್ತಾರೆ.
ಅಧಿಕಾರಿಗಳು ಆರಂಭದಲ್ಲಿ ಪಿಒಪಿ ಗಣಪತಿ ಮೂರ್ತಿ ಮಾರಾಟಕ್ಕೆ ಅವಕಾಶವಿಲ್ಲ ಎನ್ನುತ್ತಾರೆ. ಕೊನೇ ಸಮಯದಲ್ಲಿ ಮಾರಾಟ ಮಾಡುವವರನ್ನು ನೋಡಿ ಸುಮ್ಮನಿರುತ್ತಾರೆ. ಇದರಿಂದ ನೈಸರ್ಗಿಕ ಗಣಪತಿ ಮಾಡುವವರಿಗೆ ಆರ್ಥಿಕವಾಗಿ ಬಹಳಷ್ಟು ನಷ್ಟವಾಗುತ್ತಿದೆ. ಅಲ್ಲದೆ, ಪರಿಸರ ಹಾಳು ಮಾಡಲು ಅಧಿಕಾರಿಗಳೇ ದಾರಿ ಮಾಡಿಕೊಟ್ಟಂತಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ನಗರದಲ್ಲಿ ಪಿಒಪಿ ಗಣಪತಿ ತಯಾರಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಈಗಿನಿಂದಲೇ ಅವುಗಳನ್ನು ಬಂದ್ ಮಾಡಿಸಬೇಕು. | ರಾಘವೇಂದ್ರ ಟಿ., ನೈಸರ್ಗಿಕ ಗಣಪತಿ ತಯಾರಕ ಪಿಒಪಿ ಗಣಪತಿ ಮಾರಾಟಕ್ಕೆ ಯಾವ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ನಗರದಲ್ಲಿ ಈಗಾಗಲೇ ಪಿಒಪಿ ಗಣಪತಿ ಮಾಡಲು ಸಿದ್ಧತೆ ಮಾಡಿಕೊಂಡವರಿಗೆ ಸೂಚನೆ ಕೊಟ್ಟು ಬಂದ್ ಮಾಡಿಸಿದ್ದೇವೆ. ಕದ್ದುಮುಚ್ಚಿ ಯಾರಾದರೂ ಮಾಡುತ್ತಿದ್ದರೆ ನಮ್ಮ ಗಮನಕ್ಕೆ ತಂದರೆ ಕೂಡಲೇ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. | ನಿಂಗಪ್ಪ ಕುಮ್ಮಣ್ಣನವರ, ನಗರಸಭೆ ಆಯುಕ್ತ, ರಾಣೆಬೆನ್ನೂರ