

ಬಂಗಾರಪೇಟೆ : ಪರಿಸರಕ್ಕೆ ಹಾನಿಕರ ಮತ್ತು ಜಲಚರಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ರಾಸಾಯನಿಕಯುಕ್ತ ಮತ್ತು ಲೋಹಗಳನ್ನು ಹೊಂದಿರುವ ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿ ಒಂದು ವರ್ಷವಾಗಿದ್ದರೂ ನೀರಿನ ತೊಟ್ಟಿಯಲ್ಲಿ ಕರಗದೆ ಹಾಗೆಯೇ ಉಳಿದುಕೊಂಡಿವೆ.
ಪುರಸಭೆಯಿಂದ ಕಾರಹಳ್ಳಿ ಮುಖ್ಯರಸ್ತೆಯಲ್ಲಿರುವ ಪುರಸಭೆ ಹಳೇ ಪಂಪ್ ಹೌಸ್ ಬಳಿ ದೊಡ್ಡ ನೀರಿನ ತೊಟ್ಟಿ ನಿರ್ಮಿಸಿ, ಅದರಲ್ಲಿಯೇ ಗಣೇಶನ ಮೂರ್ತಿಗಳನ್ನು ವಿಸರ್ಜನೆ ಮಾಡಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿತ್ತು. ಕನಿಷ್ಠ ನೂರಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಕಳೆದ ವರ್ಷ ವಿಸರ್ಜನೆ ಮಾಡಿದ್ದು, ವರ್ಷವಾದರೂ ಮೂರ್ತಿಗಳು ಕರಗದೆ ಹಾಗೆಯೇ ಉಳಿದಿವೆ. ಇವೆಲ್ಲ ಪಿಒಪಿ ಮೂರ್ತಿಗಳಾಗಿದ್ದರಿಂದ ನೀರಿನಲ್ಲಿ ಕರಗಿಲ್ಲ.
ನಾಲ್ಕೈದು ವರ್ಷಗಳ ಹಿಂದೆ ಗಣೇಶ ಮೂರ್ತಿಗಳ ವಿಸರ್ಜನೆಯನ್ನು ಬಂಗಾರಪೇಟೆ ದೊಡ್ಡ ಕೆರೆಯಲ್ಲಿ ವಿಸರ್ಜಿಸಲಾಗುತ್ತಿತ್ತು. ಇದರಿಂದ ಕೆರೆ ನೀರಿಗೆ ಹಾನಿ ಉಂಟಾಗುವ ಲಕ್ಷಣ ಗೋಚರಿಸಿದ್ದವು. ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸಿದ್ದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೊಸದಾಗಿ ತೊಟ್ಟಿ ನಿರ್ಮಿಸಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲ ಮಾಡಿಕೊಟ್ಟಿದ್ದರು.
ಗಣೇಶ ಹಬ್ಬ ಸಮೀಪಿಸಿದ ಹಿನ್ನೆಲೆ ಪುರಸಭೆ ಅಧ್ಯಕ್ಷ ಗೋವಿಂದ ಮತ್ತು ಆರೋಗ್ಯ ನಿರೀಕ್ಷಕ (ಪ್ರಭಾರ) ಹರೀಶ್ ನೇತೃತ್ವದಲ್ಲಿ ಸುಮಾರು 60 ಪೌರ ಕಾರ್ಮಿಕರೊಂದಿಗೆ ನೀರಿನ ತೊಟ್ಟಿ ಸ್ವಚ್ಛ ಮಾಡುವ ಕಾರ್ಯದಿದೆ. ಈ ವೇಳೆ ಕಳೆದ ವರ್ಷ ವಿಸರ್ಜನೆ ಮಾಡಿದ್ದ ಹಲವು ಪಿಒಪಿ ಗಣೇಶ ಮೂರ್ತಿಗಳು ನೀರಿನಲ್ಲಿ ಕರಗದಿರುವುದು ಕಂಡು ಬಂದಿದೆ.
ತೊಟ್ಟಿಯ ನೀರು ದುರ್ವಾಸನೆ ಬೀರುತ್ತಿದೆ. ರಾಸಾಯನಿಕಯುಕ್ತ ಮೂರ್ತಿಗಳು ನೀರಿನಲ್ಲಿ ಕರಗದೆ ಬಣ್ಣ ಬಿಟ್ಟಿರುವುದೇ ಇದಕ್ಕೆ ಕಾರಣವಾಗಿದೆ. ಹಾಗಾಗಿ ಜೆಸಿಬಿ ಮೂಲಕ ಮೂರ್ತಿಗಳನ್ನು ಎತ್ತಲಾಗುತ್ತಿದೆ. ಹಾಗಾಗಿ ಈ ಬಾರಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ಪೂಜಿಸಿ ವಿಸರ್ಜನೆ ಮಾಡಲು ಕಟ್ಟುನಿಟ್ಟಿನ ಆದೇಶ ನೀಡಲು ನಿರ್ಧರಿಸಿದ್ದಾರೆ.
ಪರಿಸರ ಉಳಿಸುವುದು ನಮ್ಮೆಲ್ಲರ ಹೊಣೆ. ಜಲ ಮೂಲಗಳಿಗೆ ಹಾನಿ ಉಂಟುಮಾಡುವ ರಾಸಾಯನಿಕ ಬಣ್ಣ ಲೇಪಿತ ಪಿಒಪಿ ವಿಗ್ರಹಗಳನ್ನು ತಯಾರು ಮಾಡುವವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ. ಗೋವಿಂದ ಅಧ್ಯಕ್ಷರು, ಪುರಸಭೆ, ಬಂಗಾರಪೇಟೆ.ಗಣೇಶ ಹಬ್ಬದ ಹಿನ್ನೆಲೆ ಮೂರ್ತಿ ವಿಸರ್ಜನೆಗೆ ನೀರಿನ ತೊಟ್ಟಿಯನ್ನು ಸ್ವಚ್ಛಗೊಳಿಸಲಾಗುತ್ತಿದೆ. ಪಿಒಪಿ ಗಣೇಶ ವಿಸರ್ಜನೆ ಮಾಡುವವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು.ಹರೀಶ್ ಆರೋಗ್ಯ ನಿರೀಕ್ಷಕರು, ಪುರಸಭೆ, ಬಂಗಾರಪೇಟೆ