

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟರ್ ಆ್ ಪ್ಯಾರೀಸ್ (ಪಿಒಪಿ) ಗಣೇಶ ಮೂರ್ತಿಗಳ ನಿಷೇಧದ ನಡುವೆಯೂ ಜಿಲ್ಲೆಯ ಹಲವೆಡೆ ಪಿಒಪಿ ಮೂರ್ತಿಗಳ ತಯಾರಿಕೆ ಸದ್ದಿಲ್ಲದೆ ಆರಂಭವಾಗಿದೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ಕಾಲಿಡಲಿರುವ ಗೌರಿಗಣೇಶ ಹಬ್ಬಕ್ಕೆ ಪಿಒಪಿ ಮೂರ್ತಿಗಳು ಸಿದ್ಧಗೊಳ್ಳುತ್ತಿರುವುದು ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ. ಪ್ರತಿ ವರ್ಷ ಗಣೇಶ ಹಬ್ಬದ ಸಂದರ್ಭದಲ್ಲಿ ಸದ್ದುಮಾಡುವ ಪಿಒಪಿ ನಿಷೇಧದ ಮಾತುಗಳು ನಂತರದಲ್ಲಿ ತೆರೆಮರೆಗೆ ಸರಿದುಹೋಗುತ್ತವೆ. ಅಲ್ಲಲ್ಲಿ ಅಧಿಕಾರಿಗಳು ದಾಳಿ ನಡೆಸಿದಂತೆ ಮಾಡುತ್ತಾರಾದರೂ ಸಾರ್ವಜನಿಕ ಸ್ಥಳಗಳಲ್ಲಿ ಆಳೆತ್ತರದ ಪಿಒಪಿ ಮೂರ್ತಿಗಳ ಪ್ರತಿಷ್ಠಾಪನೆ ನಿರಾತಂಕವಾಗಿ ನಡೆದುಬರುತ್ತಿದೆ. ಇಂಥ ಗಣಪ ಮೂರ್ತಿಗಳ ವಿಸರ್ಜನೆ ಬಳಿಕ ಜಲಮೂಲಗಳಲ್ಲಿ ಇವುಗಳ ಅವಶೇಷ ತೇಲುವ ದೃಶ್ಯಗಳೂ ಸಾಮಾನ್ಯವಾಗಿದೆ. ಆದರೆ ಇದಕ್ಕೆ ಕಟ್ಟುನಿಟ್ಟಾಗಿ ಕಡಿವಾಣ ಹಾಕುವಲ್ಲಿ ಪ್ರತಿ ವರ್ಷವೂ ಜಿಲ್ಲಾಡಳಿತ ವಿಲವಾಗುತ್ತಲೇ ಬಂದಿದೆ ಎಂಬ ಬೇಸರ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಲೇ ಇದೆ.
ಮರುರೂಪ: ಕಳೆದ ವರ್ಷ ಪಿಒಪಿ ಗಣೇಶ ಮೂರ್ತಿಗಳಿಗೆ ಕಡಿವಾಣ ಹಾಕುವಲ್ಲಿ ಜಿಲ್ಲಾಡಳಿತ ಗಣೇಶ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ತಯಾರಿಕೆ ಮಾಡದಂತೆ ಎಚ್ಚರಿಕೆ ನೀಡಿತ್ತು. ಇದರಿಂದ ಹಲವು ಘಟಕಗಳಲ್ಲಿ ಅರೆಬರೆ ಮೂರ್ತಿಗಳು ಹಾಗೆ ಉಳಿದುಕೊಳ್ಳುವಂತಾಗಿತ್ತು. ಈ ಬಾರಿ ಅದೇ ಹಳೇ ಮೂರ್ತಿಗಳಿಗೆ ಮರುರೂಪ ಕೊಡುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ. ಜಿಲ್ಲಾಡಳಿತ ಎಚ್ಚೆತ್ತುಕೊಂಡು ಜಿಲ್ಲೆಯಲ್ಲಿನ ಗಣೇಶಮೂರ್ತಿ ತಯಾರಿಕಾ ಘಟಕಗಳ ಮೇಲೆ ನಿಗಾವಹಿಸದಿದ್ದರೆ ಪರಿಸರಕ್ಕೆ ಮಾರಕವಾಗಲಿರುವ ಪಿಒಪಿಗಳು ಜಲಮೂಲಗಳ ಒಡಲು ಸೇರಲಿವೆ.
ಕಟ್ಟುನಿಟ್ಟಿನ ಪಾಲನೆ ಇಲ್ಲ ಪರಿಸರಕ್ಕೆ ಮಾರಕವಾಗಿರುವ ಪಿಒಪಿ ಮೂರ್ತಿಗಳ ತಯಾರಿಕೆ, ಮಾರಾಟವನ್ನು ನಿಷೇಧಿಸಿ ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ, ಗ್ರಾಮಾಂತರ ಜಿಲ್ಲೆಯಲ್ಲಿ ಇದು ಕಟ್ಟುನಿಟ್ಟಾಗಿ ಪಾಲನೆಯಾಗುವುದಿಲ್ಲ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟರ್ ಆ್ ಪ್ಯಾರಿಸ್ ಗಣಪ ಮೂರ್ತಿಗಳ ಅಬ್ಬರಕ್ಕೆ ವೇದಿಕೆ ಸಿದ್ದಗೊಳ್ಳುತ್ತಿರುವ ಮುನ್ಸೂಚನೆ ಕಂಡುಬರುತ್ತಿದೆ.
ಅವಶೇಷಗಳಿಂದ ಧಾರ್ಮಿಕತೆಗೆ ಧಕ್ಕೆ ಗಣೇಶೋತ್ಸವ ಬಳಿಕ ಕೆರೆಕುಂಟೆಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸಲಾಗುತ್ತಿತ್ತು. ಇದಾದ ಕೆಲವು ದಿನಗಳ ಬಳಿಕ ಸ್ಥಳೀಯ ಸಂಸ್ಥೆಗಳು ನೀರಿನಲ್ಲಿ ಕರಗದ ಪಿಒಪಿ ಮೂರ್ತಿಗಳನ್ನು ಎಳೆದು ಕೆರೆಕುಂಟೆ ದಡಗಳಲ್ಲಿ ಎಸೆಯುತ್ತಿದ್ದವು. ಇಂಥ ಮೂರ್ತಿಗಳ ತ್ವರಿತ ವಿಲೇವಾರಿಯೂ ಆಗುತ್ತಿರಲಿಲ್ಲ. ಕೈಕಾಲು ಮುರಿದ, ಸೊಂಡಿಲು ಕಳೆದುಕೊಂಡ ಹೀಗೆ ನಾನಾ ಬಗೆಯಲ್ಲಿ ಮುಕ್ಕಾದ ಗಣೇಶ ಮೂರ್ತಿಗಳು ಕೆರೆದಂಡೆಗಳಲ್ಲಿ ತಿಂಗಳುಗಟ್ಟಲೆ ಅನಾಥವಾಗಿ ಬಿದ್ದಿರುತ್ತಿದ್ದ ದೃಶ್ಯಗಳು ಕಂಡುಬರುತ್ತಿದ್ದವು. ಇದು ಸಹಜವಾಗಿಯೇ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದ್ದ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಈ ಬಾರಿಯೂ ಇಂಥಹುದೇ ಸನ್ನಿವೇಶ ನಿರ್ಮಾಣವಾಗಬಹುದು ಎಂಬ ಆತಂಕ ಎದುರಾಗಿದೆ.
ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಹಾಗೂ ನೆಲಮಂಗಲ ಭಾಗದ ಟೋಲ್‌ಗಳ ಸಮೀಪದಲ್ಲಿ ಪಿಒಪಿ ಗಣೇಶ ಮೂರ್ತಿಗಳ ತಯಾರಿ ಜೋರಾಗಿದೆ. ಮಹಾರಾಷ್ಟ್ರ ಭಾಗದಿಂದ ಮೂರ್ತಿಗಳ ನಿರ್ಮಾಣಕ್ಕೆ ಬೇಕಾದ ಅಚ್ಚು ಮತ್ತಿತರ ಪರಿಕರಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ, ಆಯಾ ತಾಲೂಕು ಆಡಳಿತ ಅಧಿಕಾರಿಗಳು ಒಮ್ಮೆ ಕಣ್ಣಾಡಿಸಿದರೆ ಇದಕ್ಕೆ ಕಡಿವಾಣ ಹಾಕಬಹುದು.
ಕೃಷ್ಣಸ್ವಾಮಿ, ಪರಿಸರ ಪ್ರೇಮಿ, ದೊಡ್ಡಬಳ್ಳಾಪುರ
ಸಾರ್ವಜನಿಕರು ಪರಿಸರ ಸ್ನೇಹಿಯಾಗಿರುವ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮ ತಡೆಯಬೇಕಿದೆ. ಗ್ರಾಮಾಂತರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಗಣಪತಿ ತಯಾರಿ ಮಾಡಲಾಗುತ್ತಿದೆಯೋ ಅಲ್ಲೆಲ್ಲ ಪರಿಶೀಲನೆ ನಡೆಸುತ್ತಿದ್ದು, ಯಾರೇ ಪಿಒಪಿ ಗಣಪತಿ ಮೂರ್ತಿ ತಯಾರಿಸಿದರೂ ಕ್ರಮ ತೆಗೆದುಕೊಳ್ಳಲಾಗುವುದು.
ಕುಮಾರಸ್ವಾಮಿ, ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ