

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರಸಕ್ತ ಸಾಲಿನ ಗೌರಿಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ ಪ್ಲಾಸ್ಟರ್ ಆ್ ಪ್ಯಾರೀಸ್ (ಪಿಒಪಿಗಣೇಶ ಮೂರ್ತಿಗಳ ಮಾರಾಟ ಹಾಗೂ ಕಡಿವಾಣಕ್ಕೆ ಜಿಲ್ಲಾಡಳಿತ ಹದ್ದಿನಕಣ್ಣಿಟ್ಟಿದೆ. ಏತನ್ಮಧ್ಯೆ ಪಿಒಪಿ ಹಾಗೂ ಬಣ್ಣಲೇಪಿತ ಮೂರ್ತಿಗಳನ್ನು ಯಾವುದೆ ಕೆರೆ ಮತ್ತು ಇತರೆ ಜಲಮೂಲಗಳಲ್ಲಿ ವಿಸರ್ಜಿಸದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿದೆ.
ಆ.26 ಮತ್ತು 27 ರಂದು ಸ್ವರ್ಣಗೌರಿ ಹಾಗೂ ಗಣೇಶ ಚತುರ್ಥಿ ಹಬ್ಬದ ಆಚರಣೆ ಮಾಡುವ ಸಲುವಾಗಿ ಸಾರ್ವಜನಿಕರು ಪಿಒಪಿ ಮತ್ತು ಬಣ್ಣ ಲೇಪಿತವಾದ ಮೂರ್ತಿಗಳ ಪ್ರತಿಷ್ಟಾಪನೆಗೆ ಮುಂದಾಗದಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಜಲಮೂಲಗಳಲ್ಲಿ ವಿಸರ್ಜನೆ ನಿಷೇಧವಿರುವುದರಿಂದ ಪೊಲೀಸ್ ಸೇರಿ ಇಲಾಖಾ ಅಧಿಕಾರಿಗಳು ಮುಂಜಾಗ್ರತೆ ವಹಿಸುವಂತೆ ಜಿಲ್ಲಾಡಳಿತ ತಾಕೀತು ಮಾಡಿದೆ.
ಅನಾರೋಗ್ಯಕ್ಕೆ ದಾರಿ: ಸಾರ್ವಜನಿಕರು ಸಾಮಾನ್ಯವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಿ ಪೂಜಿಸಿದ ನಂತರ ಕೆರೆ,ಬಾವಿ, ಕಲ್ಯಾಣಿಗಳಲ್ಲಿ ಹಾಗೂ ಇನ್ನಿತರೆ ನೈಸರ್ಗಿಕ ಜಲಮೂಲಗಳಿಗೆ ವಿಸರ್ಜಿಸುವುದು ಸಂಪ್ರದಾಯವಾಗಿದೆ. ಆದರೆ ಪಿಒಪಿ ಹಾಗೂ ಬಣ್ಣಲೇಪಿತ ಮೂರ್ತಿಗಳನ್ನು ವಿಸರ್ಜಿಸುವುದರಿಂದ ನೈಸರ್ಗಿಕ ಜಲಮೂಲಗಳು ಕಲುಷಿತಗೊಳ್ಳುತ್ತವೆ. ಪಿಒಪಿ ವಿಗ್ರಹಗಳಿಂದ ಭೌತಿಕ ಹಾಗೂ ರಾಸಾಯನಿಕವಾಗಿ ನೀರಿನ ಗುಣಗಳು ಮಾರ್ಪಟ್ಟು ಪರಿಸರದ ಮೇಲೆ ಆಗುವ ದುಷ್ಪರಿಣಾಮದಿಂದ ಪ್ರಾಣಿ, ಪಕ್ಷಿ ಹಾಗೂ ಜಲಚರಗಳ ಜೀವಕ್ಕೆ ಅಪಾಯವಾಗುತ್ತದೆ. ಅದಲ್ಲದೆ ಅ ನೀರನ್ನು ಬಳಸುವುದರಿಂದ ಮನುಷ್ಯನ ಆರೋಗ್ಯದಲ್ಲಿ ಏರು-ಪೇರು ಉಂಟಾಗುತ್ತದೆ ಎಂಬುದು ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಕೆಯಾಗಿದೆ.
ಪರಿಸರ ಅಸಮತೋಲನಕ್ಕೆ ಕಾರಣ: ಪಿಒಪಿ ವಿಗ್ರಹಗಳು ನೀರಿನಲ್ಲಿ ಕರಗುವುದಿಲ್ಲ ಮತ್ತು ನೀರಿನ ಮೂಲಗಳ ಆಮ್ಲೀಯತೆಯನ್ನು ಹೆಚ್ಚಿಸುವುದರಿಂದ ಜಲಚರಗಳಿಗೆ ಹಾನಿಕಾರಕವಾಗಿದೆ. ಜಲಮೂಲಗಳ ಮಾಲಿನ್ಯದಿಂದ ಇಡೀ ಪರಿಸರ ವ್ಯವಸ್ಥೆ ಅಸಮತೋಲನಗೊಳ್ಳುತ್ತದೆ. ಆದ್ದರಿಂದ ಪ್ಲಾಸ್ಟರ್ ಆ್ ಪ್ಯಾರೀಸ್ ಮತ್ತು ಬಣ್ಣ ಲೇಪಿತವಾದ ಮೂರ್ತಿಗಳನ್ನು ತಯಾರಿಸಬಾರದು ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಲ ಮಾಲಿನ್ಯ ಕಾಯ್ದೆ ಅನ್ವಯ ಜಿಲ್ಲೆಯ ಯಾವುದೇ ಜಲ ಮೂಲಗಳಲ್ಲಿ ಪಿಒಪಿ ಮತ್ತು ಬಣ್ಣ ಲೇಪಿತ ವಿಗ್ರಹಗಳನ್ನು ವಿಸರ್ಜಿಸುವುದು ಅಪರಾಧ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ನಿಗಧಿತ ಸ್ಥಳದಲ್ಲಿ ವಿಸರ್ಜಿಸಿ: ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಬಣ್ಣರಹಿತ ಮಣ್ಣಿನ ಅಥವಾ ನೈಸರ್ಗಿಕ ಮೂರ್ತಿಗಳೊಂದಿಗೆ ಹಬ್ಬ ಆಚರಿಸಿ, ನಂತರ ಗೌರಿ ಗಣೇಶ ಮೂರ್ತಿಗಳನ್ನು ನಗರಸಭೆ,ಪುರಸಭೆ, ಪಟ್ಟಣ ಪಂಚಾಯಿತಿ ವತಿಯಿಂದ ನಿಗಧಿಪಡಿಸಿರುವ ಸ್ಥಳಗಳಲ್ಲಿ ಅಥವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಚಾರ ವಾಹನದಲ್ಲಿಯೇ ವಿಸರ್ಜಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಸ ಪ್ರತ್ಯೇಕಿಸಬೇಕು: ಮೂರ್ತಿಗಳನ್ನು ವಿಸರ್ಜಿಸುವ ಸಂದರ್ಭದಲ್ಲಿ ಹಸಿ ಕಸ (ಹೂ, ಹಣ್ಣು, ಬಾಳೆ ಕಂಬ,ಮಾವಿನ ತೋರಣ ಇತ್ಯಾದಿ ಅಲಂಕಾರಿಕ ವಸ್ತುಗಳು) ಮತ್ತು ಒಣಕಸವಾಗಿ ಪ್ರತ್ಯೇಕಿಸಬೇಕು. ಸಾರ್ವಜನಿಕವಾಗಿ ನಡೆಸುವ ಗಣೇಶ ಮೂರ್ತಿಯ ಉತ್ಸವದ ಅಲಂಕಾರಕ್ಕೆ ಮತ್ತು ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಬೇಕು, ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡಬೇಡಿ ಎಂದು ರಾಜ್ಯ ಮಾಲಿನ್ಯ ಮಂಡಳಿ ತಿಳಿಸಿದೆ.
ಗಣೇಶ ಚತುರ್ಥಿ ಸಮೀಪಿಸುತ್ತಿದ್ದು ಎಲ್ಲರೂ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಬೇಕು, ನೈಸರ್ಗಿಕ ಜಲ ಸಂಪನ್ಮೂಲಗಳನ್ನು ಸಂರಕ್ಷಿಸುವ ಮೂಲಕ ಹಬ್ಬವನ್ನು ಅರ್ಥಪೂರ್ಣಗೊಳಿಸಬೇಕು. ಸ್ಥಳೀಯ ಆಡಳಿತದ ವತಿಯಿಂದ ನಿಗಧಿಪಡಿಸಿರುವ ಜಾಗಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು. ಎಲ್ಲಿಯಾದರೂ ಪಿಒಪಿ ಮೂರ್ತಿಗಳನ್ನು ತಯಾರಿಸುವುದು ಮಾರಾಟ ಮಾಡುವುದು ಕಂಡುಬಂದರೆ ಕ್ರಮಕೈಗೊಳ್ಳಲಾಗುವುದು.
ಎ.ಬಿ.ಬಸವರಾಜು, ಜಿಲ್ಲಾಧಿಕಾರಿ ಬೆಂಗಳೂರು ಗ್ರಾಮಾಂತರ