ರಾಜ್ಯದ ಕೆಲವು ಶಾಲೆಗೆ ಮಾತ್ರ ಪೂರ್ವ ಪ್ರಾಥಮಿಕ ತರಗತಿಗಳ ಜೋಡಣೆಯ ಸರ್ಕಾರದ ಆದೇಶಕ್ಕೆ ವಿರೋಧ

Published on

ಪುತ್ತೂರು: ರಾಜ್ಯದಲ್ಲಿ ಕೇವಲ 262 ಶಾಲೆಗಳಲ್ಲಿ ಮಾತ್ರ ಪೂರ್ವ ಪ್ರಾಥಮಿಕ ತರಗತಿಗಳ ಜೋಡಣೆಯ ಸರ್ಕಾರದ ಆದೇಶವನ್ನು ಕರ್ನಾಟಕ ರಾಜ್ಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯು ವಿರೋಧಿಸುತ್ತದೆ.

ತರಗತಿಗೆ ಗರಿಷ್ಠ 30 ಮಕ್ಕಳಿಗೆ ಮಾತ್ರ ಅವಕಾಶವನ್ನು ನೀಡುವ ಮೂಲಕ ಮಕ್ಕಳಲ್ಲಿ ತಾರತಮ್ಯ ನೀತಿಯನ್ನು ಮಾಡುವ ಜತೆಗೆ ಸ್ಥಳೀಯವಾಗಿ ಹೆಚ್ಚು ಮಕ್ಕಳು ದಾಖಲಾತಿ ಹೊಂದಲು ಬಯಸಿದರೆ, ಅಲ್ಲಿಯ ಪೋಷಕರಿಗೆ ಹಾಗೂ ಶಿಕ್ಷಕರ ಮದ್ಯೆ ಗೊಂದಲ ಏರ್ಪಡುವ ಸಾಧ್ಯತೆಗಳಿವೆ. ಇದರಿಂದ ಸರ್ಕಾರಿ ಶಾಲೆ ಸಬಲೀಕರಣ ಆಗುವ ಬದಲು ಇನ್ನಷ್ಟು ದುರ್ಬಲಗೊಳಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಯೋಜನೆಯನ್ನು ಪ್ರಾರಂಭಿಸುವ ಮೊದಲು ಮೂಲ ವಾರಸುದಾರರೊಂದಿಗೆ ಮೊದಲು ಚರ್ಚೆಯನ್ನು ಮಾಡಬೇಕೆಂಬ ಕನಿಷ್ಟ ಜ್ಞಾನವನ್ನು ತೋರದೇ ಅವೈಜ್ಞಾನಿಕವಾಗಿ  ಸುತೋಲೆಯನ್ನು ಹೊರಡಿಸಿರುವುದು ಸರ್ಕಾರದ  ಬೇಜವಾಬ್ದಾರಿಯನ್ನು ಎತ್ತಿತೋರಿಸಿದೆ.

ಅದೇಶದ ಪ್ರಕಾರ ಶಾಲೆಯ ಒಂದು ಕೊಠಡಿಗೆ ಸ್ಥಳೀಯ ಚಿತ್ರಕಲಾ ಶಿಕ್ಷಕರಿಂದ ಚಿತ್ರವನ್ನು ಬಿಡಿಸಿ ಮಕ್ಕಳ ಸ್ನೇಹಿಯಾಗಿ ಮಾಡಬೇಕೆಂದು ಹೇಳಲಾಗಿದೆಯಾದರೂ, ಸರ್ಕಾರದ ಯಾವ ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರಿದ್ದಾರೆ ಎನ್ನುವ ಕನಿಷ್ಠ ಯೋಚನೆಯನ್ನು ಮಾಡಿಲ್ಲ. ಈಗಿರುವ ಅಂಗವನಾಡಿ ಕೇಂದ್ರಗಳು ಮತ್ತು ಅದರ ಕಾರ್ಯಕರ್ತೆಯರಿಗೆ ಪರ್ಯಾಯ ಏನು ಎಂದು ಸೂಚಿಸಿಲ್ಲವಾದ್ದರಿಂದ ಇಲಾಖೆ ಇಲಾಖೆ ನಡುವೆಯೇ ಸಮನ್ವಯದ ಕೊರತೆ ಮೂಡಲಿದೆ. ಶಿಕ್ಷಕ/ಶಿಕ್ಷಕಿಯರ ವೇತನವನ್ನು ತಿಂಗಳಿಗೆ 7500ರೂ. ನಿಗದಿ ಮಾಡಿದ್ದು, ಸಣ್ಣ ಮಕ್ಕಳಿಗೆ ಕಲಿಕೆಯನ್ನು ನೀಡುವ ಶಿಕ್ಷಕರ ಶ್ರಮ, ಶಿಕ್ಷಣಕ್ಕೆ ಕನಿಷ್ಟ ಬೆಲೆಯೂ ಇಲ್ಲದಂತೆ ಮಾಡಲಾಗಿದೆ.

ಅಂಗನವಾಡಿ ಕೇಂದ್ರಗಳಲ್ಲಿ ವಯಸ್ಸಿಗನುಗುಣವಾಗಿ ಹಲವಾರು ಪೂರಕ ಪೌಷ್ಟಿಕ ಆಹಾರ ಮತ್ತು ಅರೋಗ್ಯ ಕಾರ್ಯಕ್ರಮಗಳು ಜಾರಿಯಲ್ಲಿ ಇದ್ದು, ಇದಾವುದನ್ನು ಪರಿಗಣನಗೆ ತೆಗೆದು ಕೊಳ್ಳದೇ ಸರ್ಕಾರ ಬೇಕಾಬಿಟ್ಟಿಯಾಗಿ ಆದೇಶವನ್ನು ಹೊರಡಿಸಿದಂತಿದೆ. ಈ ಅದೇಶದಲ್ಲಿ ಅನೇಕ ನ್ಯೂನತೆಗಳಿದ್ದು, ಕರ್ನಾಟಕ ರಾಜ್ಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಇದನ್ನು ಖಂಡಿಸುತ್ತದೆ. ಸರ್ಕಾರವು ಈಗಾಗಲೇ ಎಸ್ಡಿಎಂಸಿ ಯ ನೇತೃತ್ವದಲ್ಲಿ ನಡೆಸುತ್ತಿರುವ ಪೂರ್ವಪ್ರಾಥಮಿಕ ತರಗತಿಗಳಿಗೆ ಶಿಕ್ಷಕರನ್ನು ಹಾಗೂ ಆಯಾ ಗಳನ್ನು ನೇಮಕ ಮಾಡುವುದು ಹಾಗೂ ಮಕ್ಕಳಿಗೆ ಪೌಷ್ಠಿಕ ಆಹಾರದ ವ್ಯವಸ್ಥೆಯನ್ನು ಕಲ್ಪಿಸಲು ಈ ಮೂಲಕ ಮನವಿ ಮಾಡುತ್ತಿದೆ ಎಂದು ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ವೇದಿಕೆ ಮೊಯ್ದಿನ್ ಕುಟ್ಟಿ ಪತ್ರಿಕಾ ಪ್ರಕಟಣೆಯನ್ನು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net