

ಆನೇಕಲ್ :ಕೋಟ್ಯಂತರ ರೂ.ವೆಚ್ಚದಲ್ಲಿ 4 ವರ್ಷದ ಹಿಂದೆ ಆರಂಭವಾಗಿ ನನೆಗುದಿಗೆ ಬಿದ್ದಿದ್ದ ಕೋಲ್ಡ್ ಸ್ಟೋರೇಜ್ ಘಟಕದ ಕಾಮಗಾರಿಗೆ ಮತ್ತೆ ಚಾಲನೆ ಸಿಕ್ಕಿದೆ, ಆದರೆ ಕಳಪೆ ಕಾಮಗಾರಿ ಮೂಲಕ ಘಟಕದಲ್ಲಿ ಆವಾಂತರ ನಡೆಯುತ್ತಿದೆ..!
ತಾಲೂಕಿನ ರಾಮಕೃಷ್ಣಪುರ ಸಮೀಪ ರಾಜ್ಯ ಸರ್ಕಾರ ಸ್ಟೇಟ್ ವೇರ್ ಹೌಸ್ ( ಎಸ್ ಡಬ್ಲ್ಯೂ ಸಿ) ಕಾಮಗಾರಿಗೆ ಟೆಂಡರ್ ಕರೆದಿತ್ತು. ಬಳಿಕ ಸೋಮು ಕಂಪನಿಗೆ ಟೆಂಡರ್ ಮೂಲಕ ಮಂಜೂರು ಮಾಡಲಾಗಿತ್ತು. ಆದರೆ ಕರೊನಾ ಕಾರಣಕ್ಕೆ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಬಳಿಕ ಸೋಮು ಕಂಪನಿಯಿಂದ ಮಂಡ್ಯ ಮೂಲದ ಗಂಗಾವರಿ ಕಂಪನಿಗೆ ಹೊರಗುತ್ತಿಗೆ ನೀಡಲಾಗಿತ್ತು. ಅದರಂತೆ 4 ವರ್ಷದ ಬಳಿಕ ಕಾಮಗಾರಿ ಕೈಗೆತ್ತುಕೊಂಡಿದ್ದು, ಇದರಲ್ಲಿ ಅನೇಕ ಬಗೆಯ ಅವಾಂತರಗಳು ಕಂಡುಬರುತ್ತಿವೆ ಎಂಬ ಅರೋಪ ಕೇಳಿಬರುತ್ತಿದೆ.
ಗುಣಮಟ್ಟಕ್ಕಿಲ್ಲ ಖಾತ್ರಿ: ಅಕ್ಕಿ, ಗೋಧಿ, ರಾಗಿ ಮತ್ತಿತರ ಆಹಾರ ಪದಾರ್ಥಗಳನ್ನು ಉಗ್ರಾಣದಲ್ಲಿಟ್ಟು ಸಮಯಕ್ಕೆ ಸರಿಯಾಗಿ ಜನರಿಗೆ ವಿತರಣೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ 800 ಕೋಟಿ ರೂ.ವೆಚ್ಚದಲ್ಲಿ ರಾಜ್ಯದ ಹಲವು ಕಡೆಗಳಲ್ಲಿ ಕಾಮಗಾರಿಗೆ ಚಾಲನೆ ನೀಡಿದೆ ಅದರಂತೆ ಈ ಭಾಗದಲ್ಲೂ ಕಾಮಗಾರಿ ಆರಂಭವಾಗಿದೆ ಆದರೆ ಇಲ್ಲಿ ನಡೆಯುವ ಕಾಮಗಾರಿ ಬೆಚ್ಚಿ ಬೀಳಿಸುವಂತಿದೆ. ನಿರ್ಮಾಣದ ಹಂತದ ಕಟ್ಟಡದಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದೆ, ಸ್ಥಳಕ್ಕೆ ಯಾವುದೇ ಇಂಜಿನಿಯರ್‌ಗಳು ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಕಾಮಗಾರಿ ಗುಣಮಟ್ಟ ಪರಿಶೀಲಿಸುತ್ತಿಲ್ಲ. ಇದರಿಂದ ಗುತ್ತಿಗೆದಾರರು ಮನಸೋಇಚ್ಚೆ ಕಾಮಗಾರಿ ನಡೆಸುತ್ತಿದ್ದಾರೆ.
ತುಕ್ಕು ಹಿಡಿದ ಕಬ್ಬಣಕ್ಕೆ ಬಣ್ಣ: ತುಕ್ಕು ಹಿಡಿದ ಕಬ್ಬಿಣ ಸಲಕರಣೆಗಳಿಗೆ ಬಣ್ಣ ಬಳಿದು ತೇಪೆ ಕೆಲಸ ಮಾಡಲಾಗುತ್ತಿದೆ, ಹೊರ ರಾಜ್ಯಗಳಿಂದ ಬಂದ ಕಾರ್ಮಿಕರಿಗೆ ಯಾವುದೇ ಸೂಕ್ತ ಸೌಲಭ್ಯ ಕಲ್ಪಿಸಿದರೆ ಅವರಿಂದ ದುಡಿಸಿಕೊಳ್ಳಲಾಗುತ್ತಿದೆ. ಕೆಲಸ ಮಾಡುವ ಜಾಗದಲ್ಲಿ ಕಾರ್ಮಿಕರಿಗೆ ಮುಂಜಾಗ್ರತ ಕ್ರಮ ಕೈಗೊಳ್ಳದೆ ಕಾಮಗಾರಿ ನಡೆಸುತ್ತಿರುವುದರಿಂದ ಮುಂದೆ ಏನಾದರು ಅನಾಹುತಗಳಾದರೆ ಯಾರೂ ಹೊಣೆ ಎಂಬುದು ಪ್ರಶ್ನೆಯಾಗಿದೆ. ಈ ಹಿಂದೆ ಕೆಲಸ ಮಾಡುವ ಜಾಗದಲ್ಲಿ ಓರ್ವ ಕಾರ್ಮಿಕ ಮೃತಪಟ್ಟು ಇಬ್ಬರಿಗೆ ಗಂಭೀರ ಗಾಯಗಳಾಗಿತ್ತು ಆದರೆ ಈ ಪ್ರಕರಣ ಹೊರಗೆ ಬಾರದ ಹಾಗೆ ಮುಚ್ಚಹಾಕಲಾಯಿತು ಎಂಬ ಆರೋಪವೂ ಇದೆ. ಈ ಕಾಮಗಾರಿ ವೇಳೆ ಅವ್ಯವಹಾರ ಕಾರಣ ಇಂಜಿನಿಯರ್ ಒಬ್ಬರನ್ನು ಅಮಾನತು ಮಾಡಿದ ಪ್ರಕರಣವೂ ನಡೆದಿದೆ. ಇಷ್ಟಾದರೂ ಪ್ರಸ್ತುತ ಯಾವ ಅಧಿಕಾರಿಯೂ ಇತ್ತ ಕಡೆ ತಲೆ ಹಾಕದಿರುವುದು ಹಲವು ಅನುಮಾನುಗಳಿಗೆ ಎಡೆಮಾಡಿಕೊಟ್ಟಿದೆ.
ಕಾಮಗಾರಿ ಅರ್ಧಕ್ಕೆ ನಿಂತು ಹಲವು ವರ್ಷವೇ ಕಳೆದಿರುವುದರಿಂದ ಕಟ್ಟಡ ನಿರ್ಮಾಣ ಜಾಗದಲ್ಲಿ 85ಕ್ಕೂ ಹೆಚ್ಚು ಕಿಟಕಿಗಳು ಕಳುವಾಗಿದ್ದು ಈ ಬಗ್ಗೆ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಜತೆಗೆ ಮತ್ತಷ್ಟು ಪರಿಕರಗಳೂ ನಾಪತ್ತೆಯಾಗಿದ್ದು ನಷ್ಟವನ್ನು ಭರಿಸಲು ಕಳಪೆ ಕಾಮಗಾರಿ ನಡೆಸಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.
ಗುತ್ತಿಗೆದಾರರು ಸರ್ಕಾರದ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದ್ದಾರೆ, 4 ವರ್ಷದಿಂದ ನನಗೆಗುದಿಗೆ ಬಿದ್ದಿದ್ದ ಕೆಲಸ ಶುರು ಮಾಡಿದ್ದಾರೆ ಆದರೆ ಎಲ್ಲವೂ ಕಳಪೆ ಕಾಮಗಾರಿಯಾಗಿದೆ,ತುಕ್ಕು ಹಿಡಿದ ಕಂಬಿಗಳಿಗೆ ಕಳಪೆ ಬಣ್ಣ ಬಳಿದು ತೇಪೆ ಹಾಕುವ ಕೆಲಸ ಮಾಡಲಾಗುತ್ತಿದೆ ಮುಂದಿನ ದಿನಗಳಲ್ಲಿ ಸಾಕಷ್ಟು ತೊಂದರೆ ಆಗಲಿದೆ ಕಾಮಗಾರಿ ಬಗ್ಗೆ ಅಧಿಕಾರಿಗಳು ಭೇಟಿಕೊಟ್ಟು ತನಿಖೆ ನಡೆಸಬೇಕು.
ರವಿ, ಹೆನ್ನಾಗರ ಗಾಪಂ ಸದಸ್ಯ