ಜಿಲ್ಲೆಯಲ್ಲಿ ಕಳಪೆ ವೈನ್ ದಂಧೆ

1adarshkdga1
Published on

ಮಡಿಕೇರಿ: ಕೊಡಗಿನ ಪ್ರವಾಸಿ ತಾಣಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸಂಗ್ರಹಿಸಿದ ಕೆಲ ಹೋಂ ಮೇಡ್ ವೈನ್ ಮಾದರಿಗಳು ಕಳಪೆ ಗುಣಮಟ್ಟದಿಂದ ಕೂಡಿರುವುದು ಬೆಳಕಿಗೆ ಬಂದಿದ್ದು, ಆತಂಕ ಸೃಷ್ಟಿಸಿದೆ.


ಕೊಡಗಿನ ಕಾಫಿ, ಜೇನು ಎಷ್ಟು ಪ್ರಸಿದ್ಧಿ ಪಡೆದಿದೆಯೋ ಅಷ್ಟೇ ಕೊಡಗಿನ ಹೋಂ ಮೇಡ್ ವೈನ್‌ಗೂ ಅಷ್ಟೇ ಬೇಡಿಕೆಯಿದೆ. ಇಡೀ ರಾಜ್ಯದಲ್ಲೇ ಕೊಡಗಿನಲ್ಲಿ ಮಾತ್ರ ಹೋಂ ಮೇಡ್ ವೈನ್ ಮಾರಾಟ ಮಾಡಲಾಗುತ್ತದೆ. ಇಲ್ಲಿ ಬರುವ ಪ್ರವಾಸಿಗರು ಒಂದು ಸಿಪ್ ದ್ರಾಕ್ಷಾರಸ ಸವಿಯದೆ ಹೋಗದಷ್ಟು ಮಟ್ಟಿಗೆ ಕೊಡಗಿನ ವೈನ್ ಫೇಮಸ್. ಹೀಗಿರುವಾಗ ಕಳಪೆ ಗುಣಮಟ್ಟದ ವೈನ್ ಮಾರಾಟದಿಂದ ಪಾರಂಪರಿಕವಾಗಿ ಉತ್ತಮ ಗುಣಮಟ್ಟದ ವೈನ್ ತಯಾರಿಸುತ್ತಿರುವವರಿಗೆ ತೊಂದರೆಯಾಗುತ್ತಿದೆ.


ಕಳಪೆ ಮಾಲು-ಬೆಲೆ ಹೆಚ್ಚು: ಜಿಲ್ಲೆಯಲ್ಲಿ ೪೦ ಬಗೆಯ ಹೋಂ ಮೇಡ್ ವೈನ್‌ಗಳು ಲಭ್ಯವಿದೆ. ದ್ರಾಕ್ಷಿ, ಗಾಂಧಾರಿ ಮೆಣಸು, ಭತ್ತ, ವೀಳ್ಯದೆಲೆ, ಶುಂಠಿ, ಸೇರಿದಂತೆ ವಿವಿಧ ವೈನ್‌ಗಳು ತಯಾರಿಸಲಾಗುತ್ತಿದೆ. ಹೋಂ ಮೇಡ್ ವೈನ್‌ಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಕಳಪೆ ಗುಣಮಟ್ಟದ ಗೊತ್ತು ಗುರಿಯಿಲ್ಲದ ವೈನ್‌ಗಳೂ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ ಇದರಿಂದ ಜಿಲ್ಲೆಗೆ ಕೆಟ್ಟ ಹೆಸರು ಬರುವುದರ ಜತೆಗೆ ನ್ಯಾಯಯುತವಾಗಿ ಹೋಂ ಮೇಡ್ ವೈನ್ ತಯಾರಿಕೆಯಲ್ಲಿ ತೊಡಗಿದ್ದ ಅದೆಷ್ಟೋ ಗೃಹಿಣಿಯರು ವೈನ್ ತಯಾರಿಕೆಯನ್ನೇ ನಿಲ್ಲಿಸಿಬಿಟ್ಟಿದ್ದಾರೆ.


ಸಾಮಾನ್ಯವಾಗಿ ಒಂದು ಬಾಟಲ್ ವೈನ್ ತಯಾರಿಕೆಗೆ ೧೦೦ ರಿಂದ ೧೨೦ ರೂ ಖರ್ಚಾಗುತ್ತದೆ. ಹಣ್ಣಿನ ದರಕ್ಕನುಗುಣವಾಗಿ ಬಾಟಲ್ ಒಂದಕ್ಕೆ ೧೫೦ ರಿಂದ ೨೫೦ ರೂವರೆಗೆ ಹೋಲ್‌ಸೇಲ್ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ಕಳಪೆ ಗುಣಮಟ್ಟದ ವೈನ್‌ಗಳನ್ನು ಇದಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ಕೆಲವೆಡೆ ಒಂದು ಬಾಟಲ್ ಕೊಂಡರೆ ಮೂರು ಬಾಟಲ್ ಉಚಿತ ಎಂದು ಆಫರ್ ಕೂಡಾ ಮಾಡಲಾಗುತ್ತಿದೆ. ಇದರಿಂದ ಉತ್ತಮ ಗುಣಮಟ್ಟದ ವೈನ್ ತಯಾರಿಸುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳಪೆ ವೈನ್ ದಂಧೆ: ಹೋಂ ಮೇಡ್ ವೈನ್ ತಯಾರಿಕೆ ಮತ್ತು ಮಾರಾಟಕ್ಕೆ ಅಬಕಾರಿ ಇಲಾಖೆಯ ಪರವಾನಗಿ ಬೇಕಾಗುವುದಿಲ್ಲ. ೮% ಗಿಂತ ಕಡಿಮೆ ಆಲ್ಕೊಹಾಲ್ ಪ್ರಮಾಣವಿರುವುದರಿಂದ ಇದನ್ನು ಎಲ್ಲಾ ಅಂಗಡಿಗಳಲ್ಲೂ ದಾಸ್ತಾನು, ಮಾರಾಟ ಮಾಡಬಹುದಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ನಕಲಿ ವೈನ್ ತಯಾರಿಕೆಯಲ್ಲಿ ತೊಡಗಿದ್ದು, ಆಹಾರ ಸುರಕ್ಷತಾ ಕ್ರಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿರುವುದು ಕಂಡುಬಂದಿದೆ.
ಈ ಬಗ್ಗೆ ಪ್ರವಾಸಿಗರು ಮತ್ತು ಸ್ಥಳೀಯರಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ಪ್ರತಿನಿತ್ಯ ದೂರುಗಳು ಬರುತ್ತಿವೆ. ಈ ಹಿನ್ನೆಲೆ ಹಲವು ಬಾರಿ ಅಧಿಕಾರಿಗಳು ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿದ್ದು, ಈ ಸಂದರ್ಭ ಕಳಪೆ ವೈನ್ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಆಗ ಅಂಗಡಿಯವರಲ್ಲಿ ವಿಚಾರಿಸಿದರೆ ಆ ವೈನ್ ಎಲ್ಲಿ ತಯಾರಿಸಲಾಗುತ್ತಿದೆ. ಯಾರು ಸರಬರಾಜು ಮಾಡುತ್ತಿದ್ದಾರೆ ಎನ್ನುವ ಬಗ್ಗೆಯೂ ಯಾವುದೇ ಮಾಹಿತಿ ಸಿಗುವುದಿಲ್ಲ. ವೈನ್ ಬಾಟಲಿ ಮೇಲೆಯೂ ಕೇವಲ ’ಕೂರ್ಗ್ ಹೋಂ ಮೇಡ್ ವೈನ್’ ಎಂದಷ್ಟೇ ಬರೆದುಕೊಂಡಿರುತ್ತದೆ.


ನಿಯಮದಂತೆ ಹೋಂ ಮೇಡ್ ವೈನ್ ಬಾಟಲಿ ಮೇಲೆ ತಯಾರಾದ ದಿನಾಂಕ, ಬ್ಯಾಚ್ ನಂಬರ್, ಎಫ್‌ಎಸ್‌ಎಸ್‌ಐ ಲೈಸನ್ಸ್ ನಂಬರ್ ಕೂಡಾ ಸ್ಪಷ್ಟವಾಗಿ ಕಾಣಿಸುವಂತೆ ಮುದ್ರಿಸಬೇಕಿದೆ.

ಬೆರಳೆಣಿಕೆಯಷ್ಟೇ ಅಧಿಕೃತ ವೈನರಿಗಳು: ಜಿಲ್ಲೆಯ ಹೋಂ ಮೇಡ್ ವೈನ್ ಅಸೋಸಿಯೇಷನ್‌ನಲ್ಲಿ ಸುಮಾರು ೧೫೦ ಸದಸ್ಯರಿದ್ದಾರೆ. ಆದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಲ್ಲಿ ಪರವಾನಗಿ ಪಡೆದಿರುವ ವೈನರಿಗಳು(ವಾರ್ಷಿಕ ೧೨ಲಕ್ಷ ವಹಿವಾಟು ಹೊಂದಿರುವ) ಕೇವಲ ೮. ನೋಂದಣಿಯಾಗಿರುವುದು ೨೪ ವೈನರಿಗಳು ಮಾತ್ರ. ಕೆಲವು ಸಂಸ್ಥೆಗಳು ನೋಂದಣಿಗೆ ಅರ್ಜಿ ಸಲ್ಲಿಸಿದ್ದರೂ ತಯಾರಿಕಾ ಘಟಕಗಳಲ್ಲಿ ನಿಯಮ ಪಾಲನೆಯಾಗದ ಹಿನ್ನೆಲೆ ತಿರಸ್ಕರಿಸಲ್ಪಟ್ಟಿವೆ. ಇದಿಷ್ಟಲ್ಲದೇ ಹಲವು ವೈನರಿಗಳು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲಿ ತಯಾರಿಸಲಾಗುತ್ತಿದೆ ಎಂಬ ಕುರಿತು ಸ್ಪಷ್ಟ ಮಾಹಿತಿ ಇಲ್ಲ.

ಜಿಲ್ಲೆಯಲ್ಲಿ ಕಳಪೆ ವೈನ್ ಮಾರಾಟವಾಗುತ್ತಿರುವ ಬಗ್ಗೆ ಪದೇ ಪದೇ ದೂರುಗಳು ಬರುತ್ತಲೇ ಇರುತ್ತವೆ. ಕೆಲವು ಕಡೆ ದಾಳಿ ನಡೆಸಿದಾಗ ಕಳಪೆ ಗುಣಮಟ್ಟದ ವೈನ್‌ಗಳು ಪತ್ತೆಯಾಗಿವೆ. ಆದರೆ ಅದು ಎಲ್ಲಿ ತಯಾರಾಗುತ್ತಿವೆ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಈ ಬಗ್ಗೆ ಅಬಕಾರಿ ಇಲಾಖೆ ಮತ್ತು ಶಾಸಕರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು.
-ಡಾ.ಅನಿಲ್ ದವನ್, ಅಂಕಿತಾಧಿಕಾರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ

ನಮ್ಮಲ್ಲಿ ೧೫೦ರಷ್ಟು ಸದಸ್ಯರಿದ್ದು, ಎಲ್ಲರೂ ಉತ್ತಮ ಗುಣಮಟ್ಟದ ವೈನ್ ತಯಾರಿಕೆಯಲ್ಲಿ ತೊಡಗಿದ್ದೇವೆ. ಕೆಲವುಕಡೆ ಕಳಪೆ ಗುಣಮಟ್ಟದ ವೈನ್ ತಯಾರಿಸುತ್ತಿದ್ದು, ತೀರಾ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಪಾರಂಪರಿಕವಾಗಿ ಗುಣಮಟ್ಟದ ವೈನ್ ತಯಾರಿಕೆ ಮಾಡುವವರಿಗೆ ತೊಂದರೆಯಾಗಿದೆ. ಹಲವರು ವೈನ್ ತಯಾರಿಕೆಯನ್ನೇ ನಿಲ್ಲಿಸಿದ್ದಾರೆ.
-ಮಿಲನ ಮುತ್ತಣ್ಣ, ಅಧ್ಯಕ್ಷೆ, ಹೋಂ ಮೇಡ್ ವೈನ್ ಅಸೋಸಿಯೇಷನ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net