

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವ ಸೌಲಭ್ಯವನ್ನೂ ಪಡೆಯಲಾಗದೆ ವಿಧವೆಯೊಬ್ಬರು ನಿತ್ಯ ಕೂಲಿ ಕೆಲಸ ಮಾಡಿ ಕಷ್ಟದಲ್ಲಿ ಜೀವನ ನಡೆಸುವಂತಾಗಿದೆ.
ತಾಲೂಕಿನ ವಾಜಗೋಡ ಗ್ರಾ.ಪಂ. ವ್ಯಾಪ್ತಿಯ ದಾನಮಾವ ಕಣಬೆಕುಳಿಯ ಕನ್ನೆ ದ್ಯಾವಾ ಹಸ್ಲರ್ ಆಧಾರ ಕಾರ್ಡ್ ಹಾಗೂ ಪಡಿತರ ಚೀಟಿ ಮಾಡಿಕೊಡುವಂತೆ ಸ್ಥಳೀಯ ಗ್ರಾ.ಪಂ. ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಲ್ಲಿ 2006ರಿಂದ ಅಂಗಲಾಚುತ್ತ ಬಂದರೂ ಏನೂ ಪ್ರಯೋಜನವಾಗಿಲ್ಲ. ಹೀಗಾಗಿ, ನಿತ್ಯ ಕೂಲಿ ಕೆಲಸ ಮಾಡುತ್ತ ಈಗಲೋ ಆಗಲೋ ಬೀಳುವ ಮನೆಯಲ್ಲಿ ಆತಂಕದಲ್ಲೇ ಜೀವನ ನಡೆಸುತ್ತಿದ್ದಾರೆ. ಈ ವಿಧವೆಗೆ ಅಸ್ತಿತ್ವ ತಿಳಿಸಲು ವೋಟರ್ ಕಾರ್ಡ್ ಮಾತ್ರ ಇದೆ. ಇದನ್ನು ಬಿಟ್ಟರೆ ಇವರ ಬಳಿ ಯಾವ ದಾಖಲೆ ಪತ್ರವೂ ಇಲ್ಲ.
ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ಇಲ್ಲದ್ದರಿಂದ ವಿಧವಾ ವೇತನವೂ ಸಿಗುತ್ತಿಲ್ಲ. ಹದಿನೈದು ವರ್ಷದ ಹಿಂದೆ ಪತಿ ದ್ಯಾವಾ ಹಸ್ಲರ್ ತೀರಿಕೊಂಡಿದ್ದಾರೆ. ಮಕ್ಕಳೂ ಇಲ್ಲದ್ದರಿಂದ ಒಂಟಿ ಜೀವನ ಇವರದ್ದಾಗಿದೆ. ಮನೆ ಶಿಥಿಲಗೊಂಡಾಗ ಸ್ಥಳೀಯ ಗ್ರಾ.ಪಂ.ನವರು ಮನೆ ದುರಸ್ತಿ ಮಾಡಿಕೊಟಿದ್ದಾರೆ.
ಪಡಿತರ ಚೀಟಿ, ಆಧಾರ್ ಕಾರ್ಡ್ ಹಾಗೂ ವಿಧವಾ ವೇತನಕ್ಕಾಗಿ ನೂರಾರು ಭಾರಿ ಕಂದಾಯ ಇಲಾಖೆ ಕಚೇರಿಗೆ ತಿರುಗಾಡಿ ಬೇಸತ್ತು ಹೋಗಿದ್ದಾರೆ. ಅಧಿಕಾರಿಗಳು ಇಲ್ಲಸಲ್ಲದ ಕಾರಣಗಳನ್ನು ಹೇಳುತ್ತ ಕಾಲ ಕಳೆಯುತ್ತಿದ್ದಾರೆ. ವೃದ್ಧೆ ಕಷ್ಟ ನಿವಾರಣೆಗೆ ಯಾರೂ ಸ್ಪಂದಿಸುತ್ತಿಲ್ಲ.
ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಈ ವಿಧವೆಗೆ ಅಗತ್ಯ ದಾಖಲಾತಿ ಹಾಗೂ ಸೌಲಭ್ಯವನ್ನು ಒದಗಿಸಬೇಕು ಎಂದು ಸ್ಥಳೀಯರು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಕನ್ನೆ ದ್ಯಾವಾ ಹಸ್ಲರ್ ಬಳಿ ಜಾತಿ ಪ್ರಮಾಣ ಪತ್ರ ಇರದ ಕಾರಣ ಪಡಿತರ, ಆಧಾರ್ ಕಾರ್ಡ್ ಹಾಗೂ ವಿಧವಾ ವೇತನ ಪಡೆಯಲಾಗುತ್ತಿಲ್ಲ. ಆದರೂ ಗ್ರಾ.ಪಂ.ನಿಂದ ಅವಳ ಮನೆ ದುರಸ್ತಿ ಮಾಡಿಕೊಡಲಾಗಿದೆ. ಈ ಕುರಿತು ಕಂದಾಯ ಇಲಾಖೆ ಅಧಿಕಾರಿಗಳು ಹೆಚ್ಚು ಗಮನ ನೀಡಬೇಕು.| ಕೃಷ್ಣಮೂರ್ತಿ ನಾಯ್ಕ ಐಸೂರು, ಅಧ್ಯಕ್ಷ, ವಾಜಗೋಡ ಗ್ರಾ.ಪಂ.50 ವರ್ಷದ ಕನ್ನೆ ಹಸ್ಲರ್ ಇನ್ನೆಷ್ಟು ವರ್ಷ ಕೂಲಿ ಕೆಲಸ ಮಾಡಲು ಸಾಧ್ಯ? ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಅವರಿಗೆ ಮೂಲ ಸೌಲಭ್ಯ ಒದಗಿಸಿಕೊಡಬೇಕು.| ಎನ್.ಜಿ. ಹೆಗಡೆ ಗೊದ್ಲಮನೆ, ಮಾಜಿ ಸದಸ್ಯ, ವಾಜಗೋಡ ಗ್ರಾ.ಪಂ.ಕನ್ನೆ ದ್ಯಾವಾ ಹಸ್ಲರ್ ಪಡಿತರ, ಆಧಾರ ಕಾರ್ಡ್, ವಿಧವಾ ವೇತನದಿಂದ ವಂಚಿತವಾಗಿರುವುದು ಗಮನಕ್ಕೆ ಬಂದಿಲ್ಲ. ಸಂಬಂಧಪಟ್ಟ ಕಂದಾಯ ನಿರೀಕ್ಷಕರಿಂದ ಮಾಹಿತಿ ಪಡೆದು ಅವರಿಂದ ಮೊದಲು ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ನೀಡುವಂತೆ ತಿಳಿಸುತ್ತೇನೆ.| ಮಂಜುಳಾ ಎಸ್. ಭಜಂತ್ರಿ, ತಹಸೀಲ್ದಾರ್, ಸಿದ್ದಾಪುರ