

| ಅವಿನ್ ಶೆಟ್ಟಿ, ಉಡುಪಿ
ಕೋವಿಡ್ ಲಾಕ್‌ಡೌನ್ ನಡುವೆ, ಗುರುವಾರ ಶೈಕ್ಷಣಿಕ ಚಟುವಟಿಕೆ ಆನ್‌ಲೈನ್ ಸ್ವರೂಪದಲ್ಲಿ ಆರಂಭಗೊಂಡಿದೆ. ಆದರೆ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣಕ್ಕೆ ಪೂರಕವಾದ ಅನುಕೂಲತೆಯೇ ಇಲ್ಲ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಮೊಬೈಲ್ ಫೋನ್ ಮತ್ತು ಟಿವಿ ಇಲ್ಲದೆ, ಜಿಲ್ಲೆಯಲ್ಲಿ 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ! 5ಜಿ, 4ಜಿ ನೆಟ್‌ವರ್ಕ್, ಸ್ಮಾರ್ಟ್ ಫೋನ್, ಲ್ಯಾಪ್‌ಟಾಪ್ ಕಂಪ್ಯೂಟರ್ ಇಲ್ಲದೆ, ಹೊಸ ಮೊಬೈಲ್ ತಂತ್ರಜ್ಞಾನದ ಅರಿವೂ ಇಲ್ಲದೆ, ಹೊಸ ಮೊಬೈಲ್ ಖರೀದಿ, ಇಂಟರ್‌ನೆಟ್ ರೀಚಾರ್ಜ್‌ಗೆ ಹಣ ಹೊಂದಿಸಲಾಗದ ಪರಿಸ್ಥಿತಿಯಲ್ಲಿ ಪಾಲಕರಿದ್ದಾರೆ ಎಂಬುದನ್ನು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಪತ್ತೆ ಮಾಡಿದೆ.
ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಒಟ್ಟು 1,21,438 ವಿದ್ಯಾರ್ಥಿಗಳು, ಪ್ರೌಢಶಾಲೆ ವಿಭಾಗದಲ್ಲಿ 41,186 ವಿದ್ಯಾರ್ಥಿಗಳು ಇಂಟರ್‌ನೆಟ್ ಸೌಲಭ್ಯ ಜತೆಗೆ ಸ್ಮಾರ್ಟ್‌ಫೋನ್ ಲ್ಯಾಪ್‌ಟಾಪ್ ಕಂಪ್ಯೂಟರ್ ಸೌಲಭ್ಯ ಹೊಂದಿದ್ದಾರೆ. ಪ್ರಾಥಮಿಕ ಶಾಲೆ ವಿಭಾಗದಲ್ಲಿ ಮೊಬೈಲ್ ಸಂಪರ್ಕ, ದೂರದರ್ಶನ ವ್ಯವಸ್ಥೆಯಿಲ್ಲದ ವಿದ್ಯಾರ್ಥಿಗಳ ಸಂಖ್ಯೆ 2688, ದೂರದರ್ಶನ ವ್ಯವಸ್ಥೆ ಮಾತ್ರ ಹೊಂದಿರುವ ವಿದ್ಯಾರ್ಥಿಗಳ ಸಂಖ್ಯೆ 25832, ಕೀಪ್ಯಾಡ್ ಮೊಬೈಲ್ ಸಂಪರ್ಕ ಮಾತ್ರ ಹೊಂದಿರುವ ವಿದ್ಯಾರ್ಥಿಗಳ ಸಂಖ್ಯೆ 12,624, ಪ್ರೌಢಶಾಲೆ ವಿಭಾಗದಲ್ಲಿ 560 ವಿದ್ಯಾರ್ಥಿಗಳಿಗೆ ಮೊಬೈಲ್ ಸಂಪರ್ಕ, ದೂರದರ್ಶನ ವ್ಯವಸ್ಥೆ ಇಲ್ಲ. 3394 ವಿದ್ಯಾರ್ಥಿಗಳು ಕೀ ಪ್ಯಾಡ್ ಮೊಬೈಲ್ ಹೊಂದಿದ್ದಾರೆ.
ನೆರವಿನ ನಿರೀಕ್ಷೆಯಲ್ಲಿ: ಮೊಬೈಲ್ ಸಂಪರ್ಕ, ಚಂದನವಾಹಿನಿ ಸವಲತ್ತು ಇಲ್ಲದ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಶಿಕ್ಷಣ ನೀಡಲು ಇಲಾಖೆ ಕಾರ್ಯಪ್ರವೃತ್ತ ವಾಗಿದೆ. ನಮ್ಮ ಕೈಲಾದಷ್ಟು ಸಹಕಾರ ನೀಡುತ್ತಿದ್ದೇವೆ. ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ನೆರವಾದರೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಅನುಕೂಲ. ಟಿವಿ ಇಲ್ಲದವರು ಮಕ್ಕಳು, ಸದ್ಯ ಪಕ್ಕದ ಮನೆಯ ಟಿವಿ ನೋಡಿ ಕಲಿಯಲು ಮನವಿ ಮಾಡಲಾಗುವುದು. ದಾನಿಗಳು ಫೋನ್ ಕೊಡುಗೆ ನೀಡಿ ಮಕ್ಕಳಿಗೆ ನೆರವಾಗಬಹುದು ಎಂದು ಶಿಕ್ಷಕ ವರ್ಗ, ಶಿಕ್ಷಣ ಇಲಾಖೆ ಅಧಿಕಾರಿಗಳ ಸಲಹೆ.
ದ.ಕ.ದಲ್ಲಿ ನಡೆದಿದೆ ಸರ್ವೇ: ದ.ಕ ಜಿಲ್ಲೆಯ ಶಾಲೆಗಳಲ್ಲಿ ಎಷ್ಟು ವಿದ್ಯಾರ್ಥಿಗಳ ಬಳಿ ಆನ್‌ಲೈನ್ ಶಿಕ್ಷಣಕ್ಕೆ ಅಗತ್ಯ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಕಂಪ್ಯೂಟರ್ ಸೌಲಭ್ಯ ಇದೆ ಎನ್ನುವ ಸರ್ವೇ ನಡೆಯುತ್ತಿದೆ. ಇನ್ನೂ ಪೂರ್ಣವಾಗಿಲ್ಲ. ಇನ್ನು ಒಂದು ವಾರದಲ್ಲಿ ಈ ಸಮೀಕ್ಷೆ ಫಲಿತಾಂಶ ಲಭ್ಯ ವಾಗಲಿದೆ ಎಂದು ಡಿಡಿಪಿಐ ಮಲ್ಲೇಸ್ವಾಮಿ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ದೂರದರ್ಶನದ ಚಂದನ ವಾಹಿನಿ ವ್ಯವಸ್ಥೆ, ಮೊಬೈಲ್ ಸಂಪರ್ಕವಿಲ್ಲದ ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ. ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ, ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗದಂತೆ ಇಲಾಖೆಯಿಂದ ಈ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. |ಎನ್.ಎಚ್.ನಾಗೂರ ಡಿಡಿಪಿಐ, ಉಡುಪಿ