

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಲೆ ಇದ್ದಲ್ಲಿ ಪ್ರತಿಭೆ ಇರುತ್ತದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಐಐಟಿ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ ಹೇಳಿದರು.
ನಗರದ ಪ್ರತಿಭಾ ಪ್ರತಿಷ್ಠಾನ ವತಿಯಿಂದ ಇಲ್ಲಿನ ಆಲೂರ ವೆಂಕಟರಾವ್ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಶಿಷ್ಯವೇತನ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಹಂತಕ್ಕೇರಿದರೂ ಸಮಾಜದ ಋಣ ತೀರಿಸುವುದನ್ನು ಮರೆಯಬಾರದು. ಸಮಾಜದ ಬಡ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಸಹಕಾರ ನೀಡುವುದು ಅವಶ್ಯ ಎಂದರು.
ವಾದಿರಾಜ ಕಾಥೋಟೆ ಮಾತನಾಡಿ, ಆತ್ಮ ವಿಶ್ವಾಸದ ಕೊರತೆ ಸಾಧನೆಗೆ ಅಡ್ಡಿಯಾಗುತ್ತದೆ. ಮಕ್ಕಳಲ್ಲಿರುವ ಶಕ್ತಿಯನ್ನು ಮನದಟ್ಟು ಮಾಡಿಕೊಟ್ಟರೆ ಅಗಾಧ ಸಾಧನೆ ಸಾಧ್ಯ. ನನ್ನಿಂದ ಸಾಧ್ಯವಿಲ್ಲ ಎಂಬ ಕೀಳರಿಮೆ ಬಿಟ್ಟರೆ ವಿದ್ಯಾರ್ಥಿಗಳು ಉತೃಷ್ಟ ಸಾಧನೆ ಮಾಡಬಹುದು ಎಂದರು.
ಶ್ರೀನಿವಾಸ ಪರಾಂಡೆ ಮಾತನಾಡಿ, ಮತಾಂತರವನ್ನು ಗಂಭೀರವಾಗಿ ಪರಿಗಣಿಸಬೇಕಿದ್ದು, ನಮ್ಮ ಇತಿಹಾಸ ಅವಲೋಕಿಸಿದರೆ ಎಂತಹ ಕಷ್ಟ, ಬಡತನ ಬಂದರೂ ಬ್ರಾಹ್ಮಣರು ಮತಾಂತರವಾಗಲಿಲ್ಲ. ಆದರೆ ಈಗ ಮತಾಂತರವಾಗುತ್ತಿರುವುದು ಬೇಸರದ ಸಂಗತಿ. ಬ್ರಾಹ್ಮಣ ಯುವಕ, ಯುವತಿಯರು ಮತಾಂತರ ಆಗುವುದನ್ನು ತಡೆಯಬೇಕು. ಯಾವುದೇ ದೇಶದಲ್ಲಿ ಉದ್ಯೋಗ ಮಾಡಿದರೂ ನಮ್ಮ ಸಂಪ್ರದಾಯ, ಸಂಸ್ಕೃತಿ ಉಳಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಯುವಕರಿಗೆ ಮಾರ್ಗದರ್ಶನ ಮಾಡಬೇಕು ಎಂದರು.
ರವಿಪ್ರಸಾದ ಮಾತನಾಡಿ, ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಸವಾಲುಗಳನ್ನಾಗಿ ಸ್ವೀಕರಿಸಿ ಮುನ್ನಡೆದರೆ ಯಶಸ್ಸಿನ ಪಥದಲ್ಲಿ ಸಾಗಲು ಸಾಧ್ಯ. ಸಮಾಜ ಮುಖಂಡರು ಶಿಷ್ಯವೇತನ ನೀಡಿದ್ದರಿಂದ ನಾನು ಶಿಕ್ಷಣ ಪಡೆಯಲು ಸಾಧ್ಯವಾಯಿತು. ನಾನೂ ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವ ಮೂಲಕ ಸಮಾಜದ ಋಣ ತೀರಿಸಲು ಪ್ರಯತ್ನಿಸುತ್ತೇನೆ ಎಂದರು.
93 ವಿದ್ಯಾರ್ಥಿಗಳಿಗೆ 3,80,000 ರೂ. ಶಿಷ್ಯವೇತನ ನೀಡಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಆನಂದ ಸಬನೀಸ್ ವರದಿ ವಾಚಿಸಿದರು. ಪಿ.ಜಿ. ನರಸಾಪುರ, ಅಶೋಕ ಹುದ್ದಾರ, ಡಾ. ಪ್ರಮೋದ ಚಂದಿ, ಇತರರು ಇದ್ದರು.
ವೆಂಕಟೇಶ ದೇಸಾಯಿ ಸ್ವಾಗತಿಸಿದರು. ರಮೇಶ ನಾಡಗೀರ ನಿರೂಪಿಸಿದರು. ರಾಜೀವ ಪಾಟೀಲಕುಲಕರ್ಣಿ ವಂದಿಸಿದರು.