ಬಡವಿದ್ಯಾರ್ಥಿಗಳಿಗೆ ಸಂಘ-ಸಂಸ್ಥೆಗಳ ಸಹಕಾರ ಅಗತ್ಯ, ಸರ್ಕಾರಿ ಶಾಲಾ ಮಕ್ಕಳಿಗೆ ಅಭ್ಯಾಸ ಕಿಟ್ ವಿತರಣಾ ಕಾರ್ಯಕ್ರಮ

02 Nela Ph 01 abyasa kit vitharane
Published on

ನೆಲಮಂಗಲ: ಸರ್ಕಾರಿ ಶಾಲೆಯಲ್ಲಿ ಹೆಚ್ಚು ಬಡವಿದ್ಯಾರ್ಥಿಗಳು ಕಲಿಕೆ ಮಾಡುತ್ತಿದ್ದು, ಸರ್ಕಾರೇತರ ಸಂಘ ಸಂಸ್ಥೆಗಳ ಕೊಡುಗೆ ನೀಡಬೇಕು ಎಂದು ಶಿಕ್ಷಣ ಫೌಂಡೇಷನ್ ಸಂಸ್ಥೆ ಜಿಲ್ಲಾ ಸಂಯೋಜಕ ಎಚ್.ವಿ.ವಿನೋದ್ ತಿಳಿಸಿದರು.

ನಗರಸಭೆ ವ್ಯಾಪ್ತಿಯ ಬಸವನಹಳ್ಳಿಯ ಶ್ರೀ ರಾಮ ಭಜನಾ ಮಂದಿರದ ಬಳಿ ಶಿಕ್ಷಣ ಫೌಂಡೇಷನ್ ಸಂಸ್ಥೆಯಿಂದ ಬುಧವಾರ ಆಯೋಜಿಸಿದ್ದ ಸರ್ಕಾರಿ ಶಾಲಾ ಮಕ್ಕಳಿಗೆ ಅಭ್ಯಾಸ ಕಿಟ್ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕರೊನಾ ಸೋಂಕಿನಿಂದಾಗಿ ಸುಮಾರು ನಾಲ್ಕೈದು ತಿಂಗಳ ಕಾಲ ಶಾಲೆ ಮುಚ್ಚಿರುವ ಕಾರಣ ಕೆಲ ವಿದ್ಯಾರ್ಥಿಗಳು ಪಠ್ಯಕ್ಕೆ ಸಂಬಂಧಪಟ್ಟ ವಿಚಾರ ಮರೆತ್ತಿದ್ದಾರೆ. ಅದನ್ನು ಮನಗಂಡು ನಮ್ಮ ಸಂಸ್ಥೆಯಿಂದ ಸರ್ಕಾರಿ ಶಾಲೆ ಮಕ್ಕಳ ಸ್ವ ಕಲಿಕೆ ಹಾಗೂ ನಿರಂತರ ಕಲಿಕೆ ದೃಷ್ಟಿಯಿಂದ ಅಭ್ಯಾಸ ಕಿಟ್ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ ಮಾಸ್ಕ್, ಸೋಪು ವಿತರಣೆ ಮಾಡಲಾಗುತ್ತಿದೆ ಎಂದರು.

ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಕರೊನಾ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಅರಿವು ನೀಡಲಾಗುತ್ತಿದೆ. ರಾಜ್ಯದಾದ್ಯಂತ ಸಂಸ್ಥೆಯಿಂದ 50 ಸಾವಿರಕ್ಕೂ ಹೆಚ್ಚು ಅಭ್ಯಾಸ ಕಿಟ್ ನೀಡಲಾಗಿದೆ. ಈಗಾಗಲೇ ಸಂಸ್ಥೆಯಿಂದ ಶಾಲೆಗಳಿಗೆ ಲ್ಯಾಪ್‌ಟಾಪ್, ಕಂಪ್ಯೂಟರ್ ನೀಡಿದ್ದು. ಮಂದಿನ ದಿನಗಳಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಯೋಗಕ್ಷೇಮ ಹಾಗೂ ಹಿತದೃಷ್ಟಿಯಿಂದ ಅಗತ್ಯ ವಸ್ತು ನೀಡಲಾಗುವುದು ಎಂದರು.

ಅಭ್ಯಾಸ ಕಿಟ್ ವಿತರಣೆ: ಶಿಕ್ಷಣ ಫೌಂಡೇಷನ್ ಸಂಸ್ಥೆಯಿಂದ ಹಾಗೂ ಕೆಲ ಸ್ಥಳೀಯ ದಾನಿಗಳಿಂದ 65ಕ್ಕೂ ಹೆಚ್ಚು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಗಣಿತ ಹಾಗೂ ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದಂತೆ 3 ಅಭ್ಯಾಸ ಪುಸ್ತಗಳ ಅಗತ್ಯ ಕಲಿಕಾ ಸಾಮಗ್ರಿ ಸೇರಿದಂತೆ ಮಾಸ್ಕ್, ಸೋಪು ವಿತರಣೆ ಮಾಡಲಾಯಿತು.

ಸಂಸ್ಥೆ ತಾಲೂಕು ಸಂಯೋಜಕ ಗಂಗಾಧರ್, ಮಾರ್ಗದರ್ಶಕ ಬೊಮ್ಮರಾಜು, ಬಸವನಹಳ್ಳಿ ಸರ್ಕಾರಿ ಶಾಲೆ ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕ ಎಸ್.ಸಿದ್ದಲಿಂಗಯ್ಯ, ಕವಿತಾ, ಎನ್.ರಂಗಸ್ವಾಮಿ, ದಾನಿಗಳಾದ ಹಂಸವೇಣಿ, ಎಚ್.ಮಹೇಶ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಬಿ.ಚಿಕ್ಕಣ್ಣ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net