

ತಿ.ನರಸೀಪುರ: ಕೃಷಿ ಇಲಾಖೆ ರೈತರಿಗೆ ವಿತರಿಸಿರುವ ಖಾಸಗಿ ಕಂಪನಿಯ ಮುಸುಕಿನ ಜೋಳದ ಬಿತ್ತನೆ ಬೀಜ ಮೊಳಕೆಯೊಡೆದಿಲ್ಲ. ಕಳಪೆ ಗುಣಮಟ್ಟದ ಬೀಜವನ್ನು ಸರಬರಾಜು ಮಾಡಿರುವುದರಿಂದ ಮೊಳಕೆ ಬಾರದೆ ರೈತರಿಗೆ ನಷ್ಟವಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ತಾಲೂಕಿನ ಸೋಸಲೆ ಹೋಬಳಿಯ ಬೂದಹಳ್ಳಿ ಸೇರಿದಂತೆ ನಾಗಲಗೆರೆ ಹಾಗೂ ಕೋಣಗಹಳ್ಳಿಯ ಸುತ್ತಲಮುತ್ತಲಿನ ಮಳೆಯಾಶ್ರಿತ ಭೂ ಪ್ರದೇಶದಲ್ಲಿ ಕೃಷಿ ಇಲಾಖೆ ವಿತರಿಸಿದ ಬೀಜವನ್ನು ಬಿತ್ತನೆ ಮಾಡಿದ್ದು, ಮೊಳಕೆ ಬಂದಿಲ್ಲ ಎಂದು ಸೋಮವಾರ ರೈತರು ದೂರಿದರು.
ಜೂನ್ ಆರಂಭದಲ್ಲಿ ಕೃಷಿ ಇಲಾಖೆ ಪ್ರತಿ ಎಕರೆಗೆ 600 ರೂ. ಬೆಲೆಯ 4 ಕೆಜಿ ತೂಕದ ಖಾಸಗಿ ಕಂಪನಿಯ ಮುಸುಕಿನ ಜೋಳ ಬಿತ್ತನೆ ಬೀಜವನ್ನು ವಿತರಣೆ ಮಾಡಿದ್ದು, ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಿ 8 ರಿಂದ 10 ದಿನಗಳಾದರೂ ಮೊಳಕೆಯೊಡೆದಿಲ್ಲ. ಇದರಿಂದಾಗಿ ಪ್ರತಿ ಎಕರೆಗೆ 50 ರಿಂದ 60 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ರೈತರು ಅಳಲು ತೋಡಿಕೊಂಡರು.
ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬೂದಹಳ್ಳಿ ಶಂಕರ್ ಮಾತನಾಡಿ, ಈ ಭಾಗದಲ್ಲಿ ರೈತರು ಖಾಸಗಿ ಕಂಪನಿಯ ಮುಸುಕಿನ ಜೋಳ ಬಿತ್ತನೆ ಮಾಡಿದ್ದು, ಸಮರ್ಪಕವಾಗಿ ಮೊಳಕೆ ಬಾರದೆ ಭಾರಿ ನಷ್ಟವನ್ನು ಅನುಭವಿಸಿದ್ದಾರೆ. ಇಲಾಖೆಯ ಅಧಿಕಾರಿಗಳು ರೈತರ ಜಮೀನುಗಳನ್ನು ಪರಿಶೀಲನೆ ನಡೆಸಿ, ಕಂಪನಿ ಕಡೆಯಿಂದ ನಷ್ಟ ಭರಿಸಬೇಕು ಎಂದು ಒತ್ತಾಯಿಸಿದರು.
ರೈತರು ಬೆಳೆದ ಮುಸುಕಿನ ಜೋಳವನ್ನು ಸರ್ಕಾರ ಪ್ರತಿ ಕ್ವಿಂಟಾಲ್‌ಗೆ 2200 ರಿಂದ 2500 ರೂ. ಗಳನ್ನು ನೀಡಿ ಖರೀಸುತ್ತದೆ. ಆದರೆ ರೈತರಿಗೆ ಬಿತ್ತನೆ ಬೀಜ ನೀಡುವಾಗ ಪ್ರತಿ ಕೆಜಿಗೆ 150 ರೂ.ಗಳನ್ನು ವಿಧಿಸುತ್ತಿದೆ. ಹಾಗಾಗಿ ರೈತ ತಮ್ಮಲ್ಲಿ ಬೆಳೆದ ಎಲ್ಲ ಫಸಲುಗಳ ಬಿತ್ತನೆ ಬೀಜವನ್ನು ಸ್ವತಃ ರೈತರೇ ಉತ್ಪಾದಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೃಷಿ ಇಲಾಖೆ ರೈತರಿಗೆ ಯಾವುದೇ ಬಿತ್ತನೆ ಬೀಜವನ್ನು ಸರಬರಾಜು ಮಾಡುವ ಮುನ್ನ ಪ್ರಾಯೋಗಿಕವಾಗಿ ಬಿತ್ತನೆ ಮಾಡಿ ಉತ್ತಮ ಫಲಿತಾಂಶ ಬಂದಲ್ಲಿ ಮಾತ್ರ ರೈತರಿಗೆ ಬಿತ್ತನೆ ಬೀಜವನ್ನು ಸರಬರಾಜು ಮಾಡಲು ಶಿಫಾರಸು ಮಾಡಬೇಕು. ಈ ಭಾಗದಲ್ಲಿ ಬಿತ್ತನೆ ಮಾಡಿದ ಬೀಜ ಬಹುತೇಕ ಮೊಳಕೆ ಬಂದಿಲ್ಲದಿರುವುದನ್ನು ಗಮನಿಸಿದರೆ ಕೃಷಿ ಇಲಾಖೆ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಕಳಪೆ ಬೀಜ ಸರಬರಾಜು ಮಾಡಿದ ಕಂಪನಿ ಮತ್ತು ಕಂಪನಿಗೆ ಸಹಕಾರ ನೀಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ರೈತ ಸಂಘದ ಚಿದರವಳ್ಳಿ ನಾಗೇಂದ್ರ ಅಗ್ರಹಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ, ಸೋಸಲೆ ಹೋಬಳಿ ಅಧ್ಯಕ್ಷ ಬೂದಹಳ್ಳಿ ರಮೇಶ್, ರೈತರಾದ ದಿನೇಶ್, ಸೋಮಣ್ಣ, ಬಸವರಾಜು, ಬೂದಹಳ್ಳಿ ನಾಗಣ್ಣ, ಮಲ್ಲಯ್ಯ, ಮಾದಯ್ಯ ಹಾಗೂ ಇತರರು ಹಾಜರಿದ್ದರು.