

ತುಮಕೂರು: ಡಾಂಬರು ಹಾಕಿದ 24 ಗಂಟೆಯಲ್ಲೇ ಡಾಂಬರೀಕರಣ ರಸ್ತೆಯ ಗುಣಮಟ್ಟದ ‘ಬಣ್ಣ’ ಬಯಲಾಗಿದೆ.
ಮಹಾನಗರ ಪಾಲಿಕೆಯ 28ನೇ ವಾರ್ಡ್ ವ್ಯಾಪ್ತಿಯ ಸರಸ್ವತಿಪುರಂನ ವಿವೇಕಾನಂದ ಉದ್ಯಾನವನ ಮುಂಭಾಗದ 200 ಮೀಟರ್ ರಸ್ತೆಗೆ ಶುಕ್ರವಾರ ಸಂಜೆ ಹಾಕಲಾಗಿದ್ದ ಡಾಂಬರು ಭಾನುವಾರ ಬೆಳಗ್ಗೆ ಹೊತ್ತಿಗೆ ಕಿತ್ತುಬಂದಿದೆ.
ವಿವೇಕಾನಂದ ಉದ್ಯಾನವನ ಸುತ್ತಮುತ್ತಲಿನ 4 ಅಡ್ಡರಸ್ತೆಗಳನ್ನು ಮಹಾನಗರ ಪಾಲಿಕೆ ವತಿಯಿಂದ ಡಾಂಬರು ಹಾಕಿ ಅಭಿವೃದ್ಧಿ ಪಡಿಸಲಾಗಿದೆ. ರಸ್ತೆ ಅಭಿವೃದ್ಧಿ ಕಾಮಗಾರಿ ಈ ಹಿಂದೆ ಉಳಿಕೆ ಹಣದ ಜತೆಗೆ 14ನೇ ಹಣಕಾಸು ಆಯೋಗದ ವತಿಯಿಂದ 5 ಲಕ್ಷ ರೂ., ವೆಚ್ಚದಲ್ಲಿ ಕೈಗೊಳ್ಳಲಾಗಿತ್ತು. ಪಾಲಿಕೆ ಇಂಜಿನಿಯರ್‌ಗಳ ಉಸ್ತುವಾರಿಯಲ್ಲೇ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದ್ದು, ಶುಕ್ರವಾರ ಸಂಜೆ 7.30ರಲ್ಲಿ ರಸ್ತೆಗೆ ಡಾಂಬರು ಹಾಕಿ ಶೃಂಗರಿಸಲಾಗಿದೆ.
ಭಾನುವಾರ ಬೆಳಗ್ಗೆ ಆ ರಸ್ತೆಯಲ್ಲಿ ಸಣ್ಣಪುಟ್ಟ ವಾಹನಗಳು ಸಂಚರಿಸುವ ವೇಳೆ ಅಲ್ಲಲ್ಲೇ ಡಾಂಬರು ಕಿತ್ತುಕೊಂಡು ಬಂದಿದೆ. ಪಾಲಿಕೆ ಅಧಿಕಾರಿಗಳ ಉಸ್ತುವಾರಿಯಲ್ಲಿ ನಡೆದ ಕಾಮಗಾರಿಯೇ ಇಷ್ಟು ಕಳಪೆಯಿಂದ ಕೂಡಿರುವುದನ್ನು ಕಂಡು ಸ್ಥಳೀಯ ನಿವಾಸಿಗಳು ಆಶ್ಚರ್ಯಚಕಿತರಾಗಿದ್ದಾರೆ.
4 ಅಡ್ಡರಸ್ತೆಗಳ ಶೃಂಗಾರ: 4 ಅಡ್ಡರಸ್ತೆಗಳಿಗೆ ವೆಟ್ ಮಿಕ್ಸ್ ಹಾಕಿ ರೋಲರ್ ಹೊಡೆದು ಬಳಿಕ ಅದರ ಮೇಲೆ ಡಾಂಬರು ಹಾಕಲಾಗಿದೆ. ಒಟ್ಟು 400 ಮೀಟರ್‌ನಷ್ಟು ಉದ್ದದ ರಸ್ತೆಗೆ ವೆಟ್ ಮಿಕ್ಸ್ ಹಾಕಿದ್ದು ಅದರ ಮೇಲೆ ಡಾಂಬರು ಹಾಕಿ ಶೃಂಗರಿಸಲಾಗಿದೆ. ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿರುವ ಈ ರಸ್ತೆಗಳಿಗೆ 5-8 ಲಕ್ಷ ರೂ., ದುಂದು ವೆಚ್ಚ ಮಾಡಲಾಗಿದೆ.
ಆಯುಕ್ತರಿಗೆ ದೂರು: ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೊಬ್ಬರೂ ತಲೆಕೆಡಿಸಿಕೊಂಡಿಲ್ಲ. ಹಾಗಾಗಿ, ಸ್ಥಳೀಯ ನಿವಾಸಿಗಳು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹಾಗೂ ಪಾಲಿಕೆ ಆಯುಕ್ತ ಟಿ.ಭೂಬಾಲನ್‌ಗೆ ಕಳಪೆಗುಣಮಟ್ಟದ ಕಾಮಗಾರಿ ಫೋಟೋ ಸಮೇತ ದೂರು ನೀಡಿ ಗಮನಸೆಳೆದಿದ್ದಾರೆ.
4 ಅಡ್ಡರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಪಾಲಿಕೆ ಇಂಜಿನಿಯರ್ ಉಸ್ತುವಾರಿಯಲ್ಲೇ ಕಾಮಗಾರಿ ನಡೆದಿದೆ. ಕಳಪೆಗುಣಮಟ್ಟದ ಕಾಮಗಾರಿ ಬಗ್ಗೆ ಸ್ಥಳೀಯರು ಗಮನಸೆಳೆದಿದ್ದು, ಗುಣಮಟ್ಟವನ್ನು 3ನೇ ವ್ಯಕ್ತಿಯಿಂದ ಪರಿಶೀಲಿಸಲಾಗುವುದು. ಧರಣೇಂದ್ರಕುಮಾರ್ 28ನೇ ವಾರ್ಡ್ ಸದಸ್ಯ ಡಾಂಬರು ಹಾಕಿದ 24 ಗಂಟೆಯಲ್ಲೇ ರಸ್ತೆಯ ಅಲ್ಲಲ್ಲಿ ಕಿತ್ತುಬಂದಿದೆ. ಕಳಪೆ ಕಾಮಗಾರಿ ಬಗ್ಗೆ ಎಂಎಲ್‌ಎ, ಕಮೀಷನರ್‌ಗೂ ದೂರ ನೀಡಲಾಗಿದೆ. ಪಾಲಿಕೆ ಇಂಜಿನಿಯರ್‌ಗಳ ಸಮ್ಮುಖದಲ್ಲೇ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಆಯುಕ್ತರು ಇತ್ತ ಗಮನಹರಿಸಲಿ. ಕಲ್ಲೇಶಪ್ಪ ಸ್ಥಳೀಯ ನಿವಾಸಿ