ಚಿಕ್ಕಮಗಳೂರಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ

Bandh
Published on

ಚಿಕ್ಕಮಗಳೂರು: ರಾಜ್ಯ ಸರ್ಕಾರ ರಚಿಸಿರುವ ಮರಾಠಾ ಅಭಿವೃದ್ಧಿ ಪ್ರಾಧಿಕಾರವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಶನಿವಾರ ನೀಡಿದ್ದ ಕರ್ನಾಟಕ ಬಂದ್ ಕರೆಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನಜೀವನ ಬಹುತೇಕ ಸಹಜ ಸ್ಥಿತಿಯಲ್ಲೇ ಇತ್ತು.

ನಗರದ ಪ್ರಮುಖ ವಾಣಿಜ್ಯ ವಹಿವಾಟು ಕೇಂದ್ರವಾದ ಎಂ.ಜಿ. ರಸ್ತೆ ಹಾಗೂ ಐ.ಜಿ.ರಸ್ತೆಯಲ್ಲಿ ಬೆಳಗ್ಗಿನಿಂದಲೇ ಅಂಗಡಿ ಮುಂಗಟ್ಟುಗಳು, ಹೋಟೆಲ್‍ಗಳು ಸಾಲು ಸಾಲಾಗಿ ಬಂದ್ ಆಗಿದ್ದು, ಉಳಿದಂತೆ ಮಾರುಕಟ್ಟೆ ರಸ್ತೆ, ಬಸವನಹಳ್ಳಿ ಮುಖ್ಯರಸ್ತೆ, ಬೇಲೂರು ರಸ್ತೆ, ಮಲ್ಲಂದೂರು ರಸ್ತೆಗಳಲ್ಲಿ ಬಹುತೇಕ ಅಂಗಡಿಗಳು ಕ್ಯಾಂಟೀನ್‍ಗಳು ತೆರೆದೇ ಇದ್ದವು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಚೇರಿಗಳು, ಬ್ಯಾಂಕ್‍ಗಳು, ಎಲ್‍ ಐಸಿ ಮತ್ತಿತರ ವಾಣಿಜ್ಯ ವ್ಯವಹಾರದ ಕೇಂದ್ರಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.

ಜನಜೀವನದ ಮೇಲೆ ಪರಿಣಾಮವಿಲ್ಲ

ಎಂ.ಜಿ.ರಸ್ತೆಯಲ್ಲಿ ಪ್ರತಿಭಟನಾಕಾರರ ಮೆರವಣಿಗೆ ಅತ್ತ ಸಾಗುತ್ತಿದ್ದಂತೆ ಸಾಕಷ್ಟು ಅಂಗಡಿ ಮಳಿಗೆಗಳು ತೆರೆದು ಕಾರ್ಯ. ನಿರ್ವಹಿಸಲಾರಂಭಿಸಿದವು. ಸಾಮಾನ್ಯ ಜನಜೀವನದ ಮೇಲೆ ಅಷ್ಟಾಗಿ ಪರಿಣಾಮವಾಗಲಿಲ್ಲ.

ಪೆಟ್ರೋಲ್ ಬಂಕ್‍ಗಳು, ಹಾಲಿನ ಅಂಗಡಿ, ಔಷಧಿ ಅಂಗಡಿ, ಹೂವು, ಹಣ್ಣು, ತರಕಾರಿ ಅಂಗಡಿಗಳು ಎಂದಿನಂತೆ ತೆರೆದಿದ್ದವು. ಸರ್ಕಾರಿ ಹಾಗೂ ಖಾಸಗಿ ಬಸ್‍ಗಳು, ಸರಕು ಸಾಗಣೆಯ ವಾಹನಗಳು ಹಾಗೂ ಆಟೋಗಳ ಸಂಚಾರ ಸಾಮಾನ್ಯವಾಗಿತ್ತು. ಖಾಸಗಿ ವಾಹನಗಳ ಸಂಚಾರ ಸಹ ಎಂದಿನಂತೆಯೇ ಇತ್ತು.

ಬಂದ್‍ಗೆ ಮನವೊಲಿಸಲು ಯತ್ನ

ಕರವೇ ಹಾಗೂ ಕನ್ನಡಸೇನೆಯ ಮುಖ್ಯಸ್ಥರಾದ ತೇಗೂರು ಜಗದೀಶ್ ಹಾಗೂ ಪಿ.ಸಿ.ರಾಜೇಗೌಡ ನೇತೃತ್ವ ವಹಿಸಿದ್ದು, ಈ ಎರಡು ಸಂಘಟನೆಗಳಲ್ಲದೆ, ಇತರ ಸಂಘಟನೆಗಳ ಕೆಲವು ಕಾರ್ಯಕರ್ತರು ಬೆಳಗಿನಿಂದಲೇ ಬೀದಿಗಳಲ್ಲಿ ಸಾಗಿ ಅಂಗಡಿಗಳನ್ನು ಮುಚ್ಚುವಂತೆ ಕೋರಿದರು. ಕೆಲವು ಹೋಟೆಲ್‍ಗಳನ್ನು ಮುಚ್ಚುವಂತೆ ಬಲವಂತಗೊಳಿಸಿದ್ದು ಕಂಡು ಬಂತು.

ತೇಗೂರು ಜಗದೀಶ್ ನೇತೃತ್ವದ ತಂಡ ಬೆಳಗ್ಗೆ ಸಾರಿಗೆ ಬಸ್ ನಿಲ್ದಾಣಕ್ಕೆ ತೆರಳಿ ಬಸ್ ಸಂಚಾರ ಸ್ಥಗಿತಗೊಳಿಸುವಂತೆ ನಿಲ್ದಾಣದ ಅಧಿಕಾರಿಗಳನ್ನು ಆಗ್ರಹಿಸಿದ್ದು, ಅದಕ್ಕೆ ಸ್ಪಂದನೆ ಸಿಗದ ಕಾರಣ ರಸ್ತೆಯಲ್ಲಿ ಕೆಲಕಾಲ ರಸ್ತೆತಡೆ ನಡೆಸಿದರು. ಅನಂತರ ಪೊಲೀಸರು ಮಧ್ಯೆ ಪ್ರವೇಶಿಸಿದ ಹಿನ್ನೆಲೆಯಲ್ಲಿ ರಸ್ತೆತಡೆ ಕೈಬಿಡಲಾಯಿತು.

ಎರಡು ಕಡೆ ಪ್ರತಿಭಟನೆ

ನಗರದ ಹನುಮಂತಪ್ಪ ವೃತ್ತದಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದರು. ಬಳಿಕ ಆಜಾದ್ ಪಾರ್ಕ್ ವೃತ್ತದವರೆಗೆ ಮೆರವಣಿಗೆಯಲ್ಲಿ ಸಾಗಿ ಅಲ್ಲೂ ಪ್ರತಿಭಟನಾ ಸಭೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಮರಾಠಾ ಅಭಿವೃದ್ಧಿ ಪ್ರಾಧಿಕಾರವನ್ನು ಕೂಡಲೇ ರದ್ದುಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಭೆಯಲ್ಲಿ ಮುಖಂಡರಾದ ಜೆಡಿಎಸ್‍ನ ಎಚ್.ಎಚ್.ದೇವರಾಜ್, ಕಾಂಗ್ರೆಸ್‍ನ ಎಂ.ಎಲ್.ಮೂರ್ತಿ, ಬಿಎಸ್‍ಪಿಯ ಕೆ.ಟಿ.ರಾಧಾಕೃಷ್ಣ, ಸಿಪಿಐನ ಬಿ.ಅಮ್ಜದ್, ಆಮ್ ಆದ್ಮಿಯ ಡಾ.ಸುಂದರಗೌಡ, ಡಾ.ರಾಜ್‍ಕುಮಾರ್ ಅಭಿಮಾನಿ ಸಂಘದ ಬಿ.ಎಂ.ಕುಮಾರ್ ಮತ್ತಿತರರು ಮಾತನಾಡಿದರು.

ಜಾಗರ ಹೋಬಳಿ ಕಸಾಪ ಅಧ್ಯಕ್ಷ ಕಳವಾಸೆ ರವಿ, ದಲಿತ್ ಜನಸೇನಾದ ಅನಿಲ್ ಆನಂದ್, ಎಸ್‍ಡಿಪಿಐನ ಅಜ್ಮತ್ ಪಾಷಾ, ದಲಿತ ಸಂಘರ್ಷ ಸಮಿತಿಯ ಮರ್ಲೆ ಅಣ್ಣಯ್ಯ, ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ರಸೂಲ್ ಖಾನ್, ಜೆಡಿಎಸ್ ಮುಖಂಡರಾದ ಎಚ್.ಎಸ್.ಮಂಜಪ್ಪ, ಹೊಲದಗದ್ದೆ ಗಿರೀಶ್, ಹುಣಸೇಮಕ್ಕಿ ಲಕ್ಷ್ಮಣ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net