ಕಳಪೆ ಕ್ರಿಮಿನಾಶಕಗಳಿಂದ ಜನರ ಆರೋಗ್ಯಕ್ಕೆ ಮಾರಕ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ

kumaraswamy
Published on

ಬೆಂಗಳೂರು: ದೇಶದಲ್ಲಿ ಕಳಪೆ ರಸಗೊಬ್ಬರ ಹಾಗೂ ಕಳಪೆ ಕೀಟನಾಶಕಗಳು ರೈತನ ಬದುಕನ್ನು ನಾಶ ಮಾಡುತ್ತಿವೆ. ಜತೆಗೆ ಇವು ಜನರ ಆರೋಗ್ಯಕ್ಕೆ ಮಾರಕವಾಗಿದ್ದು, ಭವಿಷ್ಯದಲ್ಲಿ ಭಾರಿ ಸಮಸ್ಯೆಯನ್ನು ತಂದೊಡ್ಡಲಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದರು.

ನಗರದ ಯಲಹಂಕದಲ್ಲಿರುವ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ (ಎನ್‌ಬಿಎಐಆರ್) 33ನೇ ಸಂಸ್ಥಾಪನಾ ದಿನಾಚರಣೆ ಹಾಗೂ 3ನೇ ಕೃಷಿ ಕೀಟ ಜೈವಿಕ ನಿಯಂತ್ರಣ ಪ್ರದರ್ಶನ ಉದ್ಘಾಟಿಸಿ ಭಾನುವಾರ ಮಾತನಾಡಿದರು.

ರಾಜ್ಯದಲ್ಲಿ ತೆಂಗು ಬೆಳೆಗಾರರು ಕಷ್ಟದಲ್ಲಿ ಇದ್ದಾರೆ. ಕಪ್ಪುತಲೆ ಹುಳದ ಬಾಧೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ವತಃ ನನ್ನ ತೋಟವು ಈ ಸಂಕಷ್ಟಕ್ಕೆ ತುತ್ತಾಗಿದ್ದು, ತೆಂಗಿನ ಮರಗಳ ಗರಿಗಳು ಒಣಗುತ್ತಿವೆ. ಸ್ವತಃ ನಾನೇ ಸಂಕಷ್ಟಕ್ಕೆ ಸಿಲುಕಿದ್ದೇನೆ. ಈ ವಿಚಾರದಲ್ಲಿ ಬೆಳೆಗಾರರ ರಕ್ಷಣೆಗೆ ಸರ್ಕಾರ ಧಾವಿಸಲಿದೆ ಎಂದು ಸಚಿವರು ಭರವಸೆ ನೀಡಿದರು.

ಸರ್ಕಾರದಿಂದ ಕೃಷಿಗೆ ಹೆಚ್ಚು ಒತ್ತು:

ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿಗೆ ಹೆಚ್ಚು ಒತ್ತು ನೀಡಿದ್ದಾರೆ. ಹನ್ನೊಂದು ವರ್ಷಗಳ ಅವರ ಆಡಳಿತದಲ್ಲಿ ಕೃಷಿ ವಲಯಕ್ಕೆ ಹೆಚ್ಚು ಉತ್ತೇಜನ ಸಿಕ್ಕಿದೆ. ರಾಷ್ಟ್ರವು ಕೃಷಿಯಲ್ಲಿ ದೊಡ್ಡ ಸಾಧನೆಗಳನ್ನು ಮಾಡುತ್ತಿದೆ. ಬೇಳೆಕಾಳು ಬೆಳೆಯಲು ರೈತರು ಮುಂದಾಗಬೇಕು ಎಂದು ಪ್ರಧಾನಿಗಳು ಕರೆ ನೀಡಿದ್ದಾರೆ. ಕೇವಲ ಅಕ್ಕಿಯಿಂದ ಪೌಷ್ಟಿಕಾಂಶ ದೊರೆಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ದ್ವಿದಳ ಧಾನ್ಯ ಉತ್ಪಾದನೆಗೆ ಸರ್ಕಾರ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಇದಕ್ಕಾಗಿ ಅವರು 35,000 ಕೋಟಿ ರೂ. ಮೊತ್ತದ ಯೋಜನೆಯನ್ನು ಘೋಷಣೆ ಮಾಡಲಾಗಿದೆ ಎಂದು ಸಚಿವರು ವಿವರಿಸಿದರು.

ಪ್ರಗತಿಪರ ಕೃಷಿಕರಿಗೆ ಸನ್ಮಾನ:

ಇದೇ ವೇಳೆ ಪ್ರಗತಿಪರ ಹಾಗೂ ನಿಸರ್ಗ ಪ್ರೇರಿತ ಕೃಷಿ ಮಾಡುತ್ತಿರುವ ರೈತರನ್ನು ಸಚಿವರು ಗೌರವಿಸಿದರು. ವಿಜ್ಞಾನಿಗಳ ಆವಿಷ್ಕಾರ ಅನಾವರಣಗೊಳಿಸಿ ಸನ್ಮಾನಿಸಲಾಯಿತು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಡಾ. ಸಿ.ಎನ್. ಮಂಜುನಾಥ್, ಎನ್‌ಬಿಎಐಆರ್ ನಿರ್ದೇಶಕ ಡಾ. ಸುಶೀಲ್ ಸೇರಿ ಇತರ ಕೃಷಿ ವಿಜ್ಞಾನಿಗಳು ಹಾಜರಿದ್ದರು.

ಹಿಂದಿನ ಪೀಳಿಗೆಯ ಕೃಷಿಕರು ಕೀಟಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿದ್ದರು. ಈಗಿನ ರೈತರಿಗೂ ಕೀಟಗಳ ಕುರಿತು ಮಾಹಿತಿ ನೀಡುವ ಕೆಲಸವಾಗುತ್ತಿದೆ. ಪ್ರಧಾನಿ ಮೋದಿಯವರು ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುವ ರೈತರನ್ನು ಪ್ರೋತ್ಸಾಹಿಸಲಾಗುತ್ತಿದೆ. ರೈತರು ಕೀಟನಾಶಕ ರಹಿತ ಬೆಳೆ ಬೆಳೆದಾಗ ಜನರು ಗುಣಮಟ್ಟದ ಪದಾರ್ಥ ಸೇವಿಸಲು ಸಾಧ್ಯ.

- ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net