

ರಾಯಲ್ಪಾಡು : ಅನಾರೋಗ್ಯಪೀಡಿತ ತಂದೆಗೆ ಚಿಕಿತ್ಸೆ ಕೊಡಿಸಲು ಬಾಲಕನೊಬ್ಬ ವಾರಕ್ಕೆರಡು ಬಾರಿ 8 ಕಿ.ಮೀ ದೂರದ ಆಸ್ಪತ್ರೆಗೆ ತಳ್ಳುವ ಗಾಡಿಯಲ್ಲಿ ಕರೆದುಕೊಂಡು ಹೋಗಿ ಬರುತ್ತಿರುವ ಮನಕಲಕುವ ದೃಶ್ಯ ಕಂಡುಬಂದಿದೆ.
ಕೆ.ಪಾತೂರು ಗ್ರಾಮದ ಕೃಷ್ಣಪ್ಪ ಹಣ್ಣು, ಕಾಯಿ ವ್ಯಾಪಾರ ವಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇತ್ತೀಚಿಗೆ ಕಾಲಿಗೆ ಗಾಯವಾಗಿದ್ದು, ಗಾಯವು ನಂಜಾಗಿ ಕಾಲು ತೆಗೆಯುವಂತಹ ಪರಿಸ್ಥಿತಿಯುಂಟಾಗಿದೆ.
ಹೀಗಾಗಿ ಕೃಷ್ಣಪ್ಪನ ಪುತ್ರ ಮಧು ತಂದೆಗೆ ಚಿಕಿತ್ಸೆ ಕೊಡಿಸಲು ಸಣ್ಣದೊಂದು ತಳ್ಳುವ ಗಾಡಿಯಲ್ಲಿ ಕೆ.ಪಾತೂರಿನಿಂದ ಅಡ್ಡಗಲ್ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಎಳೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದು, ಆಧುನಿಕ ಶ್ರವಣಕುಮಾರನಂತೆ ಸೇವೆ ಸಲ್ಲಿಸುತ್ತಿದ್ದಾನೆ. ಕೃಷ್ಣಪ್ಪನಿಗೆ ಪತ್ನಿ, ಇಬ್ಬರು ಗಂಡು, ಒಂದು ಹೆಣ್ಣು ಮಗು ಇದ್ದರೂ ಪತ್ನಿ ಇಬ್ಬರು ಮಕ್ಕಳೊಂದಿಗೆ ತವರಿನಲ್ಲಿದ್ದಾರೆ. ಅರ್ಥಿಕವಾಗಿ ಸಬಲರಲ್ಲದ ಕೃಷ್ಣಪ್ಪ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಸಿಆರ್‌ಪಿ ಕೆ.ವೇಣುಗೋಪಾಲ್ ಹಾಗೂ ಸಹೋದ್ಯೋಗಿಗಳು ದಾರಿಯಲ್ಲಿ ಹೋಗುತ್ತಿರುವುದನ್ನು ಗಮನಿಸಿ, ಸಂಸ್ಥೆಗಳಿಂದ ಸಹಕಾರ ಕೊಡಿಸುವುದಾಗಿ ತಿಳಿಸಿದ್ದಾರೆ. ಸರ್ಕಾರ ಇಂತಹ ವ್ಯಕ್ತಿಗಳನ್ನು ಗುರುತಿಸಿ ವಸತಿ ಯೋಜನೆಯಲ್ಲಿ ಮನೆ, ಉಚಿತವಾಗಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿಕೊಡಬೇಕು ಎಂಬುದು ಸ್ಥಳೀಯರ ಮನವಿಯಾಗಿದೆ.
ನನ್ನ ಅನಾರೋಗ್ಯವು ಮಗನ ಜೀವನಕ್ಕೆ ಶಾಪವಾಗಿದೆ. ನನ್ನಿಂದ ಮಗ ಅರ್ಧಕ್ಕೆ (4ನೇ ತರಗತಿ) ಓದು ನಿಲ್ಲಿಸಿದ್ದಾನೆ. ಅವನು ವಿದ್ಯಾವಂತನಾಗಲಿ ಎಂಬುದು ನನ್ನ ಆಸೆ, ಆದರೆ ನನಗೆ ವಾಸಿಸಲು ಮನೆಯಿಲ್ಲ, ಸರ್ಕಾರವು ನನಗೊಂದು ಮನೆಯನ್ನು ನಿರ್ಮಿಸಿಕೊಡಲಿ. ಕೃಷ್ಣಪ್ಪ, ಕೆ.ಪಾತೂರು ಕಾಲಿನ ಗಾಯ ಉಲ್ಬಣವಾಗಿ ಮಗ ತಿಂಗಳಿಂದ ತಂದೆಯನ್ನು ಚಿಕಿತ್ಸೆಗಾಗಿ ಕರೆದುಕೊಂಡು ಬರುತ್ತಿದ್ದಾನೆ. ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಎಸ್.ಎನ್.ಆರ್.ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದೇನೆ. ಡಾ.ಕೆ.ಆರ್.ಕವಿತಾ, ವೈದ್ಯಾಧಿಕಾರಿ, ಅಡ್ಡಗಲ್ ಸರ್ಕಾರಿ ಆಸ್ಪತ್ರೆ