

ಧಾರವಾಡ: ಬಡತನ ರೇಖೆಗಿಂತ ಕೆಳಗಿನ ಕುಟುಂಬ ಎಂಬುದರ ಮಾನದಂಡವಾಗಿ ಬಿಪಿಎಲ್ ಪಡಿತರ ಚೀಟಿಯನ್ನು ಪರಿಗಣಿಸಲಾಗುತ್ತದೆ. ಹೀಗಾಗಿ, ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಬಿಪಿಎಲ್ ಕಾರ್ಡ್ ಕಡ್ಡಾಯ. ಆದರೆ, ಒಂದು ವರ್ಷದಿಂದ ಅರ್ಜಿ ಹಾಕಿ ಕಾದು ಕುಳಿತರೂ ಬಿಪಿಎಲ್ ಕಾರ್ಡ್ ಸಿಗದೆ ಅರ್ಹರು ಪರದಾಡುತ್ತಿದ್ದಾರೆ.
ಲಾಕ್ಡೌನ್ ಘೋಷಿಸಿದ ಸಂದರ್ಭದಲ್ಲಿ 2020ರ ಮಾರ್ಚ್ ನಿಂದ ಹೊಸ ಪಡಿತರ ಚೀಟಿಗಳ ಅರ್ಜಿ ಸ್ವೀಕಾರ ಸ್ಥಗಿತಗೊಂಡಿತ್ತು. ಒಂದು ವಾರದಿಂದ ಆನ್ಲೈನ್ ಮೂಲಕ ಹೊಸ ಅರ್ಜಿ ಸಲ್ಲಿಕೆಗೆ ಸರ್ಕಾರ ಚಾಲನೆ ನೀಡಿದೆ. ಆದರೆ, ಅನರ್ಹ ಬಿಪಿಎಲ್ ಕಾರ್ಡ್ ಹೊಂದಿರುವವರು ಸ್ವಯಂಪ್ರೇರಿತವಾಗಿ ಬಿಟ್ಟು ಕೊಡುವವರೆಗೆ ಬಾಕಿ ಅರ್ಜಿಗಳ ವಿಲೇವಾರಿಯನ್ನು ಸ್ಥಗಿತಗೊಳಿಸಲಾಗಿದೆ. ಅನರ್ಹರಿಗೆ ಮಾರ್ಚ್ ಅಂತ್ಯದವರೆಗೆ ಕಾಲಾವಕಾಶ ನೀಡಲಾಗಿದ್ದು, ಇದರಿಂದಾಗಿ ಅರ್ಹ ಫಲಾನುಭವಿಗಳು ಮತ್ತಷ್ಟು ಕಾಯುವುದು ಅನಿವಾರ್ಯವಾಗಿದೆ.
ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ಗಳಿಗಾಗಿ ಸಲ್ಲಿಕೆಯಾದ 2,548 ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಈ ಪೈಕಿ ಹುಬ್ಬಳ್ಳಿ ನಗರ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 1,191 ಅರ್ಜಿಗಳು ವಿಲೇವಾರಿಯಾಗಿಲ್ಲ.
ಈ ಮೊದಲು ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಕಡಿಮೆ ದರದಲ್ಲಿ ಪಡಿತರ ಅಕ್ಕಿ ವಿತರಿಸಲಾಗುತ್ತಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಿಂದ ಬಿಪಿಎಲ್ ಕಾರ್ಡ್ದಾರರಿಗೆ ಉಚಿತವಾಗಿ ಅಕ್ಕಿ ವಿತರಿಸಲಾಗುತ್ತಿದೆ. ಸದ್ಯ ಪ್ರತಿ ಕುಟುಂಬದ ತಲಾ ಸದಸ್ಯನಿಗೆ 5 ಕೆಜಿ ಅಕ್ಕಿ, ಪ್ರತಿ ಕಾರ್ಡ್ಗೆ 2 ಕೆಜಿ ಗೋಧಿ ವಿತರಿಸಲಾಗುತ್ತಿದೆ. ಹೀಗಾಗಿ, ಅನರ್ಹರೂ ಬಿಪಿಎಲ್ ಕಾರ್ಡ್ ಪಡೆದು ಸರ್ಕಾರಕ್ಕೆ ವಂಚಿಸುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.
ಅನರ್ಹ ಕಾರ್ಡ್ಗಳನ್ನು ರದ್ದುಪಡಿಸುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಅವರು ಆದೇಶಿಸಿದ್ದಾರೆ. ಹೀಗಾಗಿ ಹಳೇ ಅರ್ಜಿಗಳ ವಿಲೇವಾರಿ ವಿಳಂಬವಾಗಿದೆ.
ಇವಕ್ಕೆಲ್ಲ ಕಾರ್ಡ್ ಅನಿವಾರ್ಯ: ಪಡಿತರ ಮಾತ್ರವಲ್ಲದೆ, ಸರ್ಕಾರದ ಹಲವು ಯೋಜನೆಗಳಿಗೆ ಬಿಪಿಎಲ್ ಕಾರ್ಡ್ ಅನಿವಾರ್ಯ. ವಿವಿಧ ವಸತಿ ಯೋಜನೆಗಳ ಅಡಿ ಮನೆ, ಶೌಚಗೃಹ ನಿರ್ವಣ, ಆರೋಗ್ಯ ವಿಮೆ, ರೈತರ ಬ್ಯಾಂಕ್ ಸಾಲ ಮನ್ನಾಕ್ಕೂ ಬಿಪಿಎಲ್ ಕಾರ್ಡ್ ಬೇಕು.
ಪಡಿತರ ಚೀಟಿ ಮಾನದಂಡ: ಸರ್ಕಾರಿ, ಅರೆ ಸರ್ಕಾರಿ, ಅನುದಾನಿತ ಸಂಘ- ಸಂಸ್ಥೆಗಳು, ನಿಗಮ- ಮಂಡಳಿಗಳ ಕಾಯಂ ನೌಕರರು ಬಿಪಿಎಲ್ ಕಾರ್ಡ್ ಹೊಂದಲು ಅನರ್ಹರು. 3 ಹೆಕ್ಟೇರ್ ಜಮೀನು ಹೊಂದಿದವರು, ನಗರ ಪ್ರದೇಶದಲ್ಲಿ 1,000 ಚ. ಅಡಿ ಮನೆ ಹೊಂದಿದವರು, ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಿದವರು ಕೂಡ ಅನರ್ಹರು. ಆದರೆ, ಈ ಮಾನದಂಡಗಳನ್ನು ಮರೆಮಾಚಿ ಬಿಪಿಎಲ್ ಕಾರ್ಡ್ ಪಡೆದವರು ವಾಪಸು ನೀಡಲು ಸರ್ಕಾರ ಅವಕಾಶ ಕಲ್ಪಿಸಿದೆ.
ಎಚ್ಆರ್ಎಂಎಸ್, ಸಾರಿಗೆ ಸಂಸ್ಥೆ, ನಿಗಮ- ಮಂಡಳಿಗಳ ನೌಕರರ ಮಾಹಿತಿ ಪಡೆದು, ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲಾಗುತ್ತಿದೆ. ಹೀಗಾಗಿ, ಬಾಕಿ ಅರ್ಜಿಗಳ ವಿಲೇವಾರಿ ರಾಜ್ಯವ್ಯಾಪಿ ಬಂದ್ ಆಗಿದೆ. ಈಗ ಹೊಸ ಅರ್ಜಿಗಳ ಸ್ವೀಕಾರಕ್ಕೆ ಚಾಲನೆ ನೀಡಲಾಗಿದ್ದು, ಶೀಘ್ರವೇ ಹಳೇ ಅರ್ಜಿಗಳ ಪರಿಶೀಲನೆಯೂ ಆರಂಭವಾಗಲಿದೆ. | ವಿನೋದಕುಮಾರ ಹೆಗ್ಗಳಕಿ ಆಹಾರ ಇಲಾಖೆ ಪ್ರಭಾರ ಉಪ ನಿರ್ದೇಶಕ