

ಸಿಂಧನೂರು: ನಗರದ ಬಸ್ ನಿಲ್ದಾಣ ಸೇರಿ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಭಿಕ್ಷುಕರು, ಅನಾಥರು ಅನಾರೋಗ್ಯದಿಂದ ನರಳಾಡುತ್ತಿದ್ದರೆ ಇಲ್ಲವೇ ಮೃತಪಟ್ಟಿದ್ದರೆ ನೆರವಿಗೆ ಧಾವಿಸುವ ಮೂಲಕ ಆಟೋ ಚಾಲಕ ಉಸ್ಮಾನ್ ಪಾಷಾ ಮಕಾಂದಾರ್ ಮಾನವೀಯತೆ ಮೆರೆಯುತ್ತಾರೆ.
ಇದನ್ನೂ ಓದಿ: ಆಪತ್ಬಾಂಧವ ಗೃಹರಕ್ಷಕರು; ಇಂದು ಗೃಹರಕ್ಷಕ ದಳ ದಿನ
ಕಳೆದ ಹಲವು ವರ್ಷಗಳಿಂದ ಆಟೋ ಚಾಲಕರಾಗಿ ಕೆಲಸ ಮಾಡುತ್ತಿರುವ ಉಸ್ಮಾನ್ ಪಾಷಾ ನಗರದ ಮಹಿಬೂಬಿಯಾ ಕಾಲನಿ ನಿವಾಸಿಯಾಗಿದ್ದಾರೆ. ಎರಡನೆ ತರಗತಿ ಓದಿರುವ ಉಸ್ಮಾನ್ ಪಾಷಾ ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದರೂ ಸಮಾಜ ಸೇವೆ ಮೂಲಕ ಗುರುತಿಸಿಕೊಂಡಿದ್ದಾರೆ.
ಯಾರೂ ಮುಟ್ಟದ ರೋಗ-ರುಜಿನಗಳಿಂದ ಬಳಲುತ್ತಿರುವವರನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ನೆರವಾಗುತ್ತಾರೆ. ಗರ್ಭಿಣಿಯರನ್ನು ಮನೆಯಿಂದ ಆಸ್ಪತ್ರೆಗೆ ಹಾಗೂ ಆಸ್ಪತ್ರೆಯಿಂದ ಮನೆಗೆ ಉಚಿತವಾಗಿ ಕರೆದೊಯ್ಯುತ್ತಾರೆ. ದಾನಿಗಳಿಂದ ನೆರವಿನೊಂದಿಗೆ ಅಂಗವಿಕಲರಿಗೆ ವಾಕರ್, ವ್ಹೀಲ್‌ಚೇರ್, ಸ್ಟಿಕ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಆಸ್ಪತ್ರೆಯಲ್ಲಿ ಮೃತಪಟ್ಟ ಅನಾಥರ ಶವ ಸಂಸ್ಕಾರಕ್ಕೆ ವೈದ್ಯರು ಹಾಗೂ ಪೊಲೀಸರು ಉಸ್ಮಾನ್ ಪಾಷಾರನ್ನು ಕರೆಯುತ್ತಾರೆ. 25 ಕ್ಕೂ ಹೆಚ್ಚು ಶವಗಳನ್ನು ಧಾರ್ಮಿಕ ವಿಧಿವಿಧಾನಗಳ ಮೂಲಕ ಮಾಡಿದ್ದಾರೆ.
ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಪದವಿ ಪರೀಕ್ಷೆ ಸಂದರ್ಭದಲ್ಲಿ ಬಸ್ ನಿಲ್ದಾಣದಲ್ಲಿರುವ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಉಚಿತವಾಗಿ ಆಟೋದಲ್ಲಿ ಕರೆದುಕೊಂಡು ಹೋಗುತ್ತಾರೆ. ಬೆಳಗ್ಗೆ 6ಕ್ಕೆ ಕಾಯಕ ಆರಂಭಿಸುವ ಉಸ್ಮಾನ್ ಪಾಷಾ, ದಾರಿಯಲ್ಲಿ ಕಾಣುವ ವೃದ್ಧರು, ಅಂಗವಿಕಲರು, ಅಸಹಾಯಕ ಸ್ಥಿತಿಯಲ್ಲಿರುವವರ ನೆರವಿಗೆ ಮುಂದಾಗುತ್ತಾರೆ.
ನಾನು ಆರ್ಥಿಕವಾಗಿ ಸ್ಥಿತಿವಂತನಲ್ಲದಿದ್ದರೂ ಮೊದಲಿಂದಲೂ ಸಮಾಜ ಸೇವೆ ಮಾಡುವ ತುಡಿತ ಇದೆ. ನನ್ನ ಬದುಕಿನ ಆಸರೆಯಾಗಿರುವ ಆಟೋ ಮೂಲಕ ಸೇವೆ ಮಾಡುತ್ತಿರುವೆ. ರೋಗಗಳಿಂದ ಬಳಲುವ ಅನಾಥರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸುವುದು ಹಾಗೂ ಅನಾಥರ ಶವ ಸಂಸ್ಕಾರದ ಸೇವೆಯಲ್ಲಿ ತೃಪ್ತಿ ಕಾಣುತ್ತಿರುವೆ.| ಉಸ್ಮಾನ್ ಪಾಷಾ ಮಕಾಂದಾರ್, ಆಟೋ ಚಾಲಕ, ಸಿಂಧನೂರು ಯಾರಿಗೂ ಬೇಡವಾದವರ ಸೇವೆಗೆ ಮುಂದಾಗುವ ಉಸ್ಮಾನ್ ಪಾಷಾ ಅವರ ಸೇವೆ ಮಾದರಿಯಾಗಿದೆ. ಇಂಥ ವ್ಯಕ್ತಿತ್ವದವರು ಅಪರೂಪ.| ಅವಿನಾಶ ದೇಶಪಾಂಡೆ, ಜೀವ ಸ್ಪಂದನಾ ಸೇವಾ ಟ್ರಸ್ಟ್ ಕಾರ್ಯದರ್ಶಿ, ಸಿಂಧನೂರು