

ತುರುವೇಕೆರೆ: ಶಿಕ್ಷಕರಿಬ್ಬರ ಜಗಳದಿಂದ ಪಾಠವಿಲ್ಲದೆ ಮಕ್ಕಳು ಶಾಲೆ ತೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಶತಮಾನದ ಇತಿಹಾಸ ಕಂಡಿರುವ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಅಸಡ್ಡೆಯಿಂದಾಗಿ ಮಕ್ಕಳ ದಾಖಲಾತಿ ಕುಸಿದಿದೆ.
ತಾಲೂಕಿನ ಮಾಯಸಂದ್ರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಶತಮಾನ ಸಂಭ್ರಮ. 1920ರಲ್ಲಿ ಸ್ಥಾಪನೆ ಆದ ಶಾಲೆಗೆ ಈಗ 105 ವರ್ಷಗಳ ಇತಿಹಾಸ. ಗ್ರಾಮೀಣ ಭಾಗದ ಬಡಮಕ್ಕಳ ಪ್ರಾಥಮಿಕ ಶಿಕ್ಷಣದ ಕೇಂದ್ರವಾಗಿದ್ದ ಈ ಶಾಲೆಯಲ್ಲೀಗ ಶಿಕ್ಷಕರ ನಡುವಿನ ವೈಮನಸ್ಸು, ಜಗಳದಿಂದ ಕಲಿಯುವ ವಾತಾವರಣವೇ ಹಾಳಾಗಿದೆ. ಶಾಲೆ ಪರಿಸ್ಥಿತಿ ಕಂಡು ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸಲು ಪಾಲಕರು ಬೇರೆಡೆಗೆ ವರ್ಗಾವಣೆ ಪತ್ರ (ಟಿಸಿ) ಪಡೆದು ಹೋಗಲು ಮುಂದಾಗಿರುವುದರಿಂದ ಶಾಲೆ ಉಳಿಸಿಕೊಳ್ಳುವ ಸವಾಲು ಎದುರಾಗಿದೆ.
ಐವರು ಶಿಕ್ಷಕರು ಅವತಾರ ಹಲವಾರು
ಶತಮಾನ ಕಂಡಿರುವ ಈ ಶಾಲೆಯಲ್ಲಿ ಐವರು ಶಿಕ್ಷಕರಿದ್ದು, ಒಬ್ಬರ ಮುಖ ಒಬ್ಬರು ನೋಡದಷ್ಟು ದ್ವೇಷ ಬೆಳೆಸಿಕೊಂಡಿದ್ದಾರೆ. ಮಕ್ಕಳಿಗೆ ಪಾಠ ಹೇಳಬೇಕಾದ ಶಿಕ್ಷಕರು ಎಲ್ಲವನ್ನು ಬಿಟ್ಟು "ಮೊಬೈಲ್'ನಲ್ಲಿ ಮಗ್ನರಾಗಿರುವುದು ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಬಟಾಬಯಲು ಮಾಡುವಂತಿದೆ. 1 ರಿಂದ 8ನೇ ತರಗತಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 102 ಮಕ್ಕಳು ಕಲಿಯುತ್ತಿದ್ದರು. ಈಗ ಶಾಲೆಯಲ್ಲಿ ಮಕ್ಕಳ ಸಂಖ್ಯೆ 40ಕ್ಕೆ ಕುಸಿದಿದೆ. 7ನೇ ತರಗತಿಯಿಂದ 8ನೇ ತರಗತಿಗೆ ಹೋಗಬೇಕಾದ ಮಕ್ಕಳನ್ನು ಬೇರೆ ಶಾಲೆಗೆ ಹೋಗುವಂತೆ ಅದೇ ಶಾಲೆಯ ಶಿಕ್ಷಕರೇ ಒತ್ತಾಯಿಸುತ್ತಿರುವುದು ದಾಖಲಾತಿ ಸಂಖ್ಯೆ ಕುಸಿಯಲು ಪ್ರಮುಖ ಕಾರಣ ಎನ್ನಲಾಗಿದೆ.
ಇಲಾಖೆ ಮಧ್ಯಪ್ರವೇಶಿಸಲಿ
ಇತ್ತೀಚೆಗೆ ಶಾಲೆಯಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಿದ್ದು, ಉತ್ತಮ ಸ್ಪಂದನೆ ದೊರೆತಿದೆ. ಆದರೆ, ಪ್ರಾಥಮಿಕ ಶಾಲಾ ಶಿಕ್ಷಕರ ನಡುವೆ ಸೌಹಾರ್ದ ಸಂಬಂಧ ಹಾಳಾಗಿರುವುದರಿಂದ ಶಾಲೆಯ ವಾತಾವರಣವೇ ಹದಗೆಟ್ಟಿದೆ. ಇದನ್ನು ಅರಿತಿರುವ ಪಾಲಕರು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕಾಗಲಿದೆ ಎಂಬ ಕಾರಣಕ್ಕೆ ಬೇರೆ ಶಾಲೆಗೆ ಸೇರಿಸಲು ವರ್ಗಾವಣೆ ಪತ್ರ ನೀಡುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನುತ್ತಾರೆ ಎಸ್ಡಿಎಂಸಿ ಅಧ್ಯಕ್ಷ ಕರಿಬಸವಪ್ಪ. ಹೆಚ್ಚಿನ ಮಕ್ಕಳನ್ನು ಹೊಂದಿದ್ದ ಶಾಲೆಯಲ್ಲೀಗ ಶಿಕ್ಷಕರ ಕಲಹ ದಾಖಲಾತಿ ಕುಸಿಯುವಂತೆ ಮಾಡಿದೆ. ಇನ್ನಾದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಮಧ್ಯಪ್ರವೇಶಿಸಿ ಶಾಲೆ ಉಳಿಸಬೇಕಿದೆ.
ರಾಜ್ಯಸಭಾ ಸದಸ್ಯರಿಗೂ ಇಲ್ಲ ಬೆಲೆ
ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ತವರೂರು ಮಾಯಸಂದ್ರ. ಹಾಗಾಗಿ, ತಮ್ಮೂರಿನ ಶತಮಾನದ ಶಾಲೆಯಲ್ಲಿ ದಾಖಲಾತಿ ಕುಸಿತ ಬಗ್ಗೆ ಪೋಷಕರಿಂದ ದೂರು ಕೇಳಿಬರುತ್ತಿದ್ದಂತೆ ಖುದ್ದು ಜಗ್ಗೇಶ್ ಶಾಲೆಗೆ ಭೇಟಿ ನೀಡಿ ಶಿಕ್ಷಕರು, ಪಾಲಕರಿಗೆ ತಿಳಿಹೇಳಿದ್ದರು. ದಾಖಲಾತಿ ಕುಸಿದು ಶಾಲೆ ಒಮ್ಮೆ ಬಾಗಿಲು ಹಾಕಿದರೆ ಮತ್ತೆ ಶಾಲೆ ಆರಂಭಿಸುವುದು ಕಷ್ಟ. ಹಾಗಾಗಿ ಎಲ್ಲರೂ ಒಟ್ಟಾಗಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಉತ್ತಮ ವಾತಾವರಣ ಸೃಷ್ಟಿಸುವಂತೆ ಬುದ್ಧಿ ಹೇಳಿದರು. ರಾಜ್ಯಸಭಾ ಸದಸ್ಯರೇ ಶಾಲೆಗೆ ಭೇಟಿ ನೀಡಿದ್ದರು. ತುರುವೇಕೆರೆ ಶಿಕ್ಷಣಾಧಿಕಾರಿ ಇತ್ತ ಸುಳಿಯಲಿಲ್ಲ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಡಿಡಿಪಿಐ ಜಾಣ ಮೌನವಹಿಸಿರುವುದು ಸರ್ಕಾರಿ ಶಾಲೆಗಳ ದು@ಸ್ಥಿತಿಗೆ ಮೂಲ ಕಾರಣ ಎಂದು ಪಾಲಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಮಾಯಸಂದ್ರ ಸರ್ಕಾರಿ ಪ್ರಾಥಮಿಕ ಶಾಲೆಗೆ ಈಗ 105 ವರ್ಷ. ಶತಮಾನ ಕಂಡಿರುವ ಶಾಲೆಯಲ್ಲಿ 102 ಮಕ್ಕಳು ಕಲಿಯುತ್ತಿದ್ದು, ಶಾಲೆಯ ವಾತಾವರಣ ಹದಗೆಟ್ಟಿದ್ದರಿಂದ ಪಾಲಕರು ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಲು ಟಿಸಿ ಪಡೆಯುತ್ತಿದ್ದಾರೆ. 40ಕ್ಕೆ ಮಕ್ಕಳ ಸಂಖ್ಯೆ ಕುಸಿದಿದೆ. ಬಿಇಒ ಗಮನಕ್ಕು ಶಾಲೆ ಸಮಸ್ಯೆ ಬಗ್ಗೆ ತರಲಾಗಿದೆ. ಸರ್ಕಾರಿ ಶಾಲೆ ಉಳಿಸುವುದು ಶಿಕ್ಷಕರಷ್ಟೇ ಪಾಲಕರ ಕರ್ತವ್ಯವಾಗಿದೆ. - ಕರಿಬಸವಪ್ಪ ಅಧ್ಯಕ್ಷ, ಎಸ್ಡಿಎಂಸಿ ಇನ್ನೆರಡು ದಿನಗಳಲ್ಲಿ ಖುದ್ದು ಶಾಲೆಗೆ ಭೇಟಿ ನೀಡಿ, ಹದಗೆಟ್ಟಿರುವ ಶಾಲಾ ವಾತಾವರಣ ಸರಿಪಡಿಸಲಾಗುವುದು. ಅಲ್ಲದೆ ಸಮಸ್ಯೆಯ ವರದಿ ಪಡೆದು, ಸಮಸ್ಯೆ ಸೃಷ್ಟಿಗೆ ಕಾರಣವಾಗಿರುವ ಶಿಕ್ಷಕರ ಮೇಲೆ ಮುಲಾಜಿಲ್ಲದೆ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು. ಶತಮಾನದ ಶಾಲೆ ಉಳಿಸುವ ಜವಾಬ್ದಾರಿ ಎಲ್ಲರದ್ದು. ಮಕ್ಕಳ ದಾಖಲಾತಿ ಕುಸಿಯದಂತೆ ನೋಡಿಕೊಳ್ಳಬೇಕು. ನಾನೇ ಶ್ರೀ ಶಾಲೆಗೆ ಭೇಟಿ ನೀಡಿ ಮಕ್ಕಳ, ಪಾಲಕರ ಸಭೆ ನಡೆಸುವೆ. - ಜಿ.ಪ್ರಭು ಜಿಲ್ಲಾ ಪಂಚಾಯಿತಿ ಸಿಇಒ