

ಚಿಕ್ಕಬಳ್ಳಾಪುರ: ಜಿಎಸ್‌ಟಿ ಇಳಿಕೆಯಿಂದ ರಾಜ್ಯಕ್ಕೆ ನಷ್ಟ ಉಂಟಾಗುತ್ತದೆ ಎಂಬುದರ ಅರಿವಿದ್ದಾಗಲೂ ಕರ್ನಾಟಕದ ಪರವಾಗಿ ಸಹಿ ಹಾಕಿದ್ದು ಏಕೆ? ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸುವವರು ಕಡಿಮೆಯಾದಾಗ ಬೇಸರ ವ್ಯಕ್ತಪಡಿಸುವುದು ಏತಕ್ಕೆ? ಎಂದು ಸಂಸದ ಡಾ ಕೆ.ಸುಧಾಕರ್ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ತೆರಿಗೆಗಳ ಇಳಿಕೆಯಿಂದ ರಾಜ್ಯಕ್ಕೆ ನಷ್ಟವಾಗಿರುವುದರ ಬಗ್ಗೆ ಈಗ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರದ ಜನರ ತೀರ್ಮಾನಕ್ಕೆ ಜಿಎಸ್‌ಟಿ ಕೌನ್ಸಿಲ್‌ನಲ್ಲಿರುವ 33 ಸದಸ್ಯರು ಕೂಡ ಒಪ್ಪಿದ್ದು ಕರ್ನಾಟಕ ಸರ್ಕಾರದ ಪರವಾಗಿ ಸಚಿವ ಕೃಷ್ಣ ಭೈರೇಗೌಡರು ಸಹಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
*ಜಿಎಸ್ ಟಿ ಅಂದ್ರೆ ಗ್ಯಾರಂಟಿ ಸುಲಿಗೆ ಟ್ಯಾಕ್ಸ್
ಕಾಂಗ್ರೆಸ್ ಸರ್ಕಾರದ ನೀತಿ ಗ್ಯಾರಂಟಿ ಸುಲಿಗೆ ಟ್ಯಾಕ್ಸ್ ಎನ್ನುವುದೇ ಜಿಎಸ್‌ಟಿ. ಹಾಲು, ಬಸ್ ಪ್ರಯಾಣ, ಪೆಟ್ರೋಲ್, ಡೀಸೆಲ್, ನೀರಿನ ಶುಲ್ಕ, ವಿದ್ಯುತ್ ದರ, ಸ್ಟಾಂಪ್ ಡ್ಯೂಟಿ, ಅಫಿಡವಿಟ್ ಶುಲ್ಕ, ಹೊಸ ವಾಹನಗಳ ನೋಂದಣಿ, ಸರ್ಕಾರಿ ಆಸ್ಪತ್ರೆಗಳ ಸೇವಾ ಶುಲ್ಕ ಸೇರಿದಂತೆ ಎಲ್ಲದರ ದರ ಏರಿಕೆಯಾಗಿದೆ. ಪ್ರಸಕ್ತ ಸಾಲಿನ 2025-26 ನೇ ಬಜೆಟ್ ನಲ್ಲಿ ದಲಿತರ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯ 42,017 ಕೋಟಿ ರೂ. ಅನುದಾನದಲ್ಲಿ 11,896 ಕೋಟಿ ರೂ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡುವ ಕಾಂಗ್ರೆಸ್ ನಾಯಕರು, ದಲಿತರ ನಿಗಮಗಳಿಗೆ ಅನುದಾನ ಕಡಿತದ ಬಗ್ಗೆ ಪ್ರಶ್ನಿಸುತ್ತಿಲ್ಲ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅನುದಾನದಲ್ಲಿ 90 ಕೋಟಿ ರೂ,. ವಿಶ್ವಕರ್ಮ ನಿಗಮಕ್ಕೆ 12 ಕೋಟಿ ರೂ, ಉಪ್ಪಾರ ನಿಗಮಕ್ಕೆ 7 ಕೋಟಿ ರೂ ಅನುದಾನ ಕಡಿತವಾಗಿದೆ ಎಂದು ಸಂಸದರು ಟೀಕಿಸಿದ್ದಾರೆ.
ರಾಜ್ಯದಲ್ಲಿ ಸರ್ಕಾರಿ ಶಾಲೆ ಕಟ್ಟಡಗಳ ದುರಸ್ತಿಗೆ ಹಣವಿಲ್ಲ. ಭ್ರಷ್ಟಾಚಾರದಲ್ಲಿ ಕರ್ನಾಟಕ ನಂ.1 ರಾಜ್ಯ ಹಾಗೂ ಗ್ಯಾರಂಟಿ ಯೋಜನೆಯಿಂದಾಗಿ ಅಭಿವೃದ್ಧಿಗೆ ಹಣವಿಲ್ಲ ಎಂತಲೇ ಸ್ವತಃ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆಯವರೇ ಮಂಕರಿ ಮಣ್ಣು ಹಾಕಲು ಅನುದಾನವಿಲ್ಲ ಎಂತಲೂ ಸ್ಪಷ್ಟಪಡಿಸಿದ್ದಾರೆ. ಇದು ಪಾಪರ್ ಆಗಿರುವ ಸರ್ಕಾರ ಎಂದು ವ್ಯಂಗ್ಯವಾಡಿದ್ದಾರೆ.
*ಲಾಟರಿ ಶಾಸಕರ ಆಯ್ಕೆ
ಗ್ಯಾರಂಟಿ ಯೋಜನೆಗಳ ಪ್ರಚಾರದಲ್ಲಿ ಯಾರ್ಯಾರೋ ಲಾಟರಿಯಲ್ಲಿ ಆಯ್ಕೆಯಾದಂತೆ ಶಾಸಕರಾಗಿದ್ದಾರೆ ಎಂದು ಸಂಸದರು ವ್ಯಂಗ್ಯವಾಡಿದರು.
ಕನಸು ಮನಸಿನಲ್ಲೂ ಊಹಿಸಿಕೊಂಡಿರದವರು ಸಹ ಕ್ಷೇತ್ರಗಳಲ್ಲಿ ಯಾರ್ಯಾರೋ ಆಯ್ಕೆಯಾಗಿ ಬಿಟ್ಟಿದ್ದಾರೆ. ಈಗ ಜನರು ಅವರ ಅಭಿವೃದ್ಧಿ ಕೆಲಸಗಳ ವೈಖರಿಗೆ ಹೈರಾಣರಾಗುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.