

ಜಗಳೂರು: ಬರಪೀಡಿತ ಜಗಳೂರು ತಾಲೂಕಿನ ಜನರ ಬಹು ನಿರೀಕ್ಷೆಯ ಸರ್ಕಾರಿ ಆಸ್ಪತ್ರೆ ಕಟ್ಟಡ ನಿರ್ಮಾಣ ಈ ಬಾರಿ ಬಜೆಟ್‌ನಲ್ಲಿ ಸೇರ್ಪಡೆಯಾಗಿದ್ದು ಹರ್ಷ ತಂದಿದೆ.
ಪಟ್ಟಣದ ಹೃದಯ ಭಾಗದಲ್ಲಿ ಅಂದಾಜು 4 ಎಕರೆ ವಿಸ್ತೀರ್ಣದಲ್ಲಿರುವ ಸರ್ಕಾರಿ ಆಸ್ಪತ್ರೆ 1940ರಲ್ಲಿ ಅಂದರೆ 85 ವರ್ಷ ಹಿಂದೆ ನಿರ್ಮಾಣವಾಗಿತ್ತು. ಕಟ್ಟಡ ಬಹುತೇಕ ಶಿಥಿಲಗೊಂಡಿದ್ದು ಮಳೆಗಾಲದಲ್ಲಿ ನೀರು ತುಂಬಿಕೊಳ್ಳುತ್ತಿತ್ತು.
2024 ಜು.12ರಂದು ಆಸ್ಪತ್ರೆಗೆ ಭೇಟಿ ನೀಡಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಸ್ತವ ಸ್ಥಿತಿ ಪರಿಶೀಲಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನದ ಭರವಸೆ ನೀಡಿದ್ದರು.
ಶಾಸಕ ಬಿ. ದೇವೇಂದ್ರಪ್ಪ ಅವರು ಕೂಡ ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದಲ್ಲದೆ ಕಟ್ಟಡಕ್ಕೆ ಅಗತ್ಯವಾಗಿ ಬೇಕಾದ ಜಾಗ ಗುರುತಿಸಿದ್ದರು. ಇದೀಗ ಸರ್ಕಾರ ಘೋಷಣೆ ಮಾಡಿದ್ದು ಶಾಸಕರ ಪ್ರಯತ್ನಕ್ಕೆ ಫಲ ಸಿಕ್ಕಿದೆ.
ಸೌಲಭ್ಯಗಳ ಕೊರತೆ: 2005-06ನೇ ಸಾಲಿನಲ್ಲಿ ಶಾಸಕರಾಗಿದ್ದ ಗುರುಸಿದ್ದನಗೌಡರು ಆಸ್ಪತ್ರೆಯ ಬೆಡ್‌ಗಳ ಸಂಖ್ಯೆಯನ್ನು 50 ರಿಂದ 100 ಕ್ಕೆ ಹೆಚ್ಚಿಸಿದ್ದರು. ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ ಹೆಚ್ಚಳದಿಂದ ಸೌಲಭ್ಯಗಳ ಕೊರತೆ ಹೆಚ್ಚಾಗಿದೆ. ಜಗಳೂರು, ಕೂಡ್ಲಿಗಿ, ಕೊಟ್ಟೂರು, ಮೊಳಕಾಲ್ಮೂರು, ನಾಯಕನಹಟ್ಟಿ ಭಾಗಗಳ ರೋಗಿಗಳು ಜಗಳೂರನ್ನೇ ಅಲವಂಬಿಸಿದ್ದಾರೆ. ಇದನ್ನು ಮನಗಂಡ ಶಾಸಕ ಬಿ. ದೇವೇಂದ್ರಪ್ಪ ಅವರು ಸರ್ಕಾರದ ಮೇಲೆ ಒತ್ತಡ ಹಾಕಿ ಬಜೆಟ್‌ನಲ್ಲಿ ಸೇರ್ಪಡೆಗೊಳಿಸಲು ಯಶಸ್ವಿಯಾಗಿದ್ದಾರೆ.
ಜಗಳೂರು ಸರ್ಕಾರಿ ಆಸ್ಪತ್ರೆಗೆ ನೂತನ ಕಟ್ಟಡ ನಿರ್ಮಾಣ ಕುರಿತು ಸಿ ಎಂ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ ಘೋಷಿಸಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅನುದಾನ ತಂದು ಕ್ಷೇತ್ರದ ಪ್ರಗತಿಗೆ ಆದ್ಯತೆ ನೀಡಲಾಗುವುದು. ಬಿ. ದೇವೆಂದ್ರಪ್ಪ, ಶಾಸಕ ಜಗಳೂರು.