ಇಂದಿರಾ ಕ್ಯಾಂಟೀನ್‌ಲ್ಲಿ ಕಳಪೆ ಆಹಾರ

CLK INDIRA CANTEEN 28
Published on

ಚಳ್ಳಕೆರೆ: ನಗರದ ಇಂದಿರಾ ಕ್ಯಾಂಟೀನ್‌ನಲ್ಲಿ ಗುಣಮಟ್ಟದ ಆಹಾರ ತಯಾರಿಸುತ್ತಿಲ್ಲ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

ಕ್ಯಾಂಟೀನ್ ಬಳಿ ಬುಧವಾರ ಊಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ ರೈತಮುಖಂಡರು, ಬಡವರು ಮತ್ತು ಕೂಲಿ ಕಾರ್ಮಿಕರ ಹಸಿದ ಹೊಟ್ಟೆಗೆ ಕಡಿಮೆ ದರದಲ್ಲಿ ಊಟ, ತಿಂಡಿ ಸಿಗುವ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರದ ಗುಣಮಟ್ಟತೆ ಸುಧಾರಣೆ ಆಗಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡ ಒ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಬಳಸುತ್ತಿರುವ ಸ್ಟೀಮ್ ಅಕ್ಕಿಯಿಂದ ಮೆತ್ತಗಾಗುವ ಅನ್ನ ಹೊಟ್ಟೆ ನೋವಿನ ಬಾಧೆಗೆ ಕಾರಣವಾಗುತ್ತಿದೆ. ಇದರ ಬದಲಿಗೆ ಮಸೂರಿ ಅಕ್ಕಿ ಬಳಸಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಕ್ರಿಯಿಸಿದ ಕ್ಯಾಂಟೀನ್ ನಿರ್ವಾಹಕ ಶ್ರೀಧರ್, ಸರ್ಕಾರದ ಮಾರ್ಗಸೂಚಿಯಂತೆ ತಿಂಡಿ ಮತ್ತು ಊಟದ ವ್ಯವಸ್ಥೆ ಮಾಡಲಾಗುತ್ತಿದೆ. 400ರಿಂದ 450 ತಿಂಡಿ, 250ರಿಂದ 300 ಜನ ಊಟಕ್ಕೆ ಬರುವ ಸಂಖ್ಯೆ ಇದೆ. ತಿಂಡಿಗೆ 5 ರೂ., ಊಟಕ್ಕೆ 10 ರೂ. ದರ ನಿಗದಿ ಮಾಡಲಾಗಿದೆ. ವೆಚ್ಚದ ಸಮತೋಲನವಾಗಿ ಸ್ಟೀಮ್ ಅಕ್ಕಿ ಬಳಸುತ್ತಿದ್ದೇವೆ ಎಂದು ತಿಳಿಸಿದರು.

ಏಳು ಮಂದಿ ಸಿಬ್ಬಂದಿ ಕಾರ್ಯ ನಿರ್ವಹಿಸುವ ಕ್ಯಾಂಟೀನ್‌ನಲ್ಲಿ ಕೇವಲ ಇಬ್ಬರು ಇದ್ದೇವೆ. ಕುಡಿಯಲು ಶುದ್ಧ ನೀರಿನ ವ್ಯವಸ್ಥೆ ಇಲ್ಲ. ಪ್ರತಿದಿನ ಆಟೋದಲ್ಲಿ ಕ್ಯಾನ್‌ಗಳ ಮೂಲಕ ನೀರು ತರುವುದು ಕಷ್ಟವಾಗಿದೆ ಎಂದು ಹೇಳಿದರು.

ರೈತ ಮುಖಂಡರಾದ ಆರ್.ಚಿದಾನಂದಪ್ಪ, ವಿ.ರಮೇಶ, ಮಂಜುನಾಥ, ವೀರಣ್ಣ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net