

ಮಸ್ಕಿ: ತಾಲೂಕಿನ ಬಗ್ಗಲಗುಡ್ಡ ಗ್ರಾಮದ ಬಳಿ ಇರುವ ಸರ್ವೇ ನಂ.28ರಲ್ಲಿ ಭೂಮಿ ಸಾಗುವಳಿ ಮಾಡುತ್ತಿರುವ 8 ಜನ ರೈತರ ಭೂಮಿಯನ್ನು ಮರಳಿಸಿ, ಉಳಿಮೆಗೆ ತಕರಾರು ಮಾಡದಂತೆ ಸರ್ಕಾರ ನೀಡಬೇಕು ಎಂದು ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ಸಂತೋಷ ಹಿರೇದಿನ್ನಿ ಒತ್ತಾಯಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1985ರಲ್ಲಿ ಸರ್ಕಾರಿ ಭೂಮಿಯನ್ನು 8 ಜನ ರೈತರಿಗೆ ತಲಾ ಎರಡು ಎಕರೆಯಂತೆ ನೀಡಿದ್ದು, ಇಲ್ಲಿಯವರೆಗೆ ರೈತರು ಬಿರಾಡ ತುಂಬಿ ಸಾಗುವಳಿ ಮಾಡುತ್ತಿದ್ದಾರೆ.
ಇತ್ತೀಚೆಗೆ ಅರಣ್ಯ ಇಲಾಖೆ ರೈತರು ಉಳಿಮೆ ಮಾಡುತ್ತಿದ್ದ ಭೂಮಿ ಅರಣ್ಯ ಪ್ರದೇಶಕ್ಕೆ ಸೇರಿದ್ದು ಎಂದು ಉಳುಮೆ ಮಾಡದಂತೆ ತಾಕೀತು ಮಾಡಿದ್ದಾರೆ. ಕೂಡಲೇ ಸಹಾಯಕ ಆಯುಕ್ತರು ರೈತರಿಗೆ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು ಇಲ್ಲದಿದ್ದಲ್ಲಿ ಹೋರಾಟ ನಡೆಸುವುದಾಗಿ ತಿಳಿಸಿದರು.
ಸಿಪಿಐಎಂಎಲ್ ರೆಡ್ ಸ್ಟಾರ್ ಸಂಚಾಲಕ ವೆಂಕಟೇಶ ನಾಯಕ ಚಿಲ್ಕರಾಗಿ, ರೈತರಾದ ಜಗನಪ್ಪ ಯರದೊಡ್ಡಿ ತಾಂಡಾ, ಗ್ರಾಪಂ ಸದಸ್ಯ ಮಾನಸಿಂಗ್ ರಾಠೋಡ ಇತರರಿದ್ದರು.