

ಕೃಷ್ಣಮೂರ್ತಿ ಪಿ.ಎಚ್ ಮಾಯಕೊಂಡ
ಯಾವುದೇ ಬೆಳೆಗಳನ್ನು ಬೆಳೆದರೂ ರೈತರಿಗೆ ಒಂದಿಲ್ಲೊಂದು ಪೆಟ್ಟು ಬೀಳುತ್ತಲೇ ಇರುತ್ತದೆ. ಪ್ರಸ್ತುತ, ಮಾಯಕೊಂಡ ಹಾಗೂ ಆನಗೋಡು ಹೋಬಳಿಗಳ ಹಲವಾರು ಗ್ರಾಮಗಳಲ್ಲಿ ರೈತರು ಬೆಳೆದಿರುವ ಸಿಹಿ ಕುಂಬಳದ ದರ ಪಾತಾಳಕ್ಕೆ ಕುಸಿದಿದ್ದು, ಬೆಳೆಗಾರರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೋಬಳಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಸಿಹಿ ಕುಂಬಳ, ಬೂದುಗುಂಬಳ, ಸಾಂಬಾರ್ ಸೌತೆ, ಟೋಮ್ಯಾಟೊ, ಹಸಿಮೆಣಸಿನಕಾಯಿ ಸೇರಿ ಹಲವಾರು ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುವ ಪ್ರಮುಖ ಪ್ರದೇಶಗಳಾಗಿವೆ. ಅದರಲ್ಲಿಯೂ ಕೊಡಗನೂರು ಮತ್ತು ಬೊಮ್ಮೇನಹಳ್ಳಿ ಗ್ರಾಮಗಳು ಹೋಬಳಿಗಳಲ್ಲೇ ಅತಿ ಹೆಚ್ಚಾಗಿ ಸಿಹಿ ಕುಂಬಳ ಬೆಳೆಯಲಾಗಿದೆ.
ಸಿಹಿ ಕುಂಬಳ ಬೆಳೆಯಲು ಒಂದು ಎಕರೆಗೆ 5 ರಿಂದ 6 ಸಾವಿರ ರೂ. ಕುಂಬಳ ಬೀಜ ಬೇಕಾಗುತ್ತದೆ. ರಸಗೊಬ್ಬರ, ಕೀಟನಾಶಕ, ಕೂಲಿ ಸೇರಿ ಕಟಾವಿನವರೆಗೆ 20 ಸಾವಿರ ರೂ.ಗಿಂತ ಹೆಚ್ಚು ಖರ್ಚು ಬರುತ್ತದೆ. ಸಿಹಿ ಕುಂಬಳವನ್ನು ದೂರದ ಮುಂಬೈ, ಚೆನ್ನೈ, ಬೆಂಗಳೂರು ಮಾರುಕಟ್ಟೆಗಳಿಗೆ ಸಾಗಿಸಿ ಮಾರಾಟ ಮಾಡುವ ಅನಿವಾರ್ಯತೆ ಇದೆ. ಆದ್ದರಿಂದ ಹಳ್ಳಿಗಾಡಿನ ಕೆಲವು ಲೋಕಲ್ ವರ್ತಕರಿಗೆ ಮಾರಾಟ ಮಾಡಲಾಗುವುದು ಎನ್ನುತ್ತಾರೆ ಕೃಷಿಕರು.
ಮಾಯಕೊಂಡ ಹೋಬಳಿಯ ಎಚ್. ಬಸವಾಪುರ ಗ್ರಾಮದ ರೈತ ಮಹೇಶ್ ಗೌಡ ಅವರು ಎರಡೂವರೆ ಎಕರೆ ಜಮೀನಿನಲ್ಲಿ ಅಡಕೆ ಗಿಡದ ಮಧ್ಯೆ ಮಿಶ್ರ ಬೆಳೆಯಾಗಿ ಸಿಹಿ ಕುಂಬಳ ಬೆಳೆದಿದ್ದಾರೆ. ಬೀಜ ಬಿತ್ತನೆಯಿಂದ ಕಟಾವಿನವರೆಗೆ 65 ರಿಂದ 70 ಸಾವಿರ ರೂ. ಖರ್ಚಾಗಿದೆ. ಈಗಿನ ದರಕ್ಕೆ ಖರ್ಚು ಸಹ ಸಿಗದೆ ಇರುವ ಕಾರಣ ಕುಂಬಳವನ್ನು ಕಟಾವು ಮಾಡದೆ ಹೊಲದಲ್ಲಿಯೇ ಬಿಟ್ಟಿದ್ದೇನೆ ಎಂದು ಅವರು ದುಃಸ್ಥಿತಿಯನ್ನು ವಿವರಿಸಿದರು.
ಬೆಲೆ ಪಾತಾಳಕ್ಕೆ: ಈಗಾಗಲೇ ಸಿಹಿ ಕುಂಬಳ ಕಟಾವು ಕಾರ್ಯ ನಡೆಯುತ್ತಿದೆ. ಆದರೆ, ದರ ಕಡಿಮೆಯಿದ್ದು, ರೈತರನ್ನು ಚಿಂತೆಗೀಡು ಮಾಡಿದೆ. ಕಳೆದ ವರ್ಷ ಪ್ರತಿ ಕೆಜಿಗೆ 20 ರಿಂದ 25 ರೂ. ದರವಿತ್ತು. ಪ್ರಸ್ತುತ ಮಾರುಕಟ್ಟೆಯಲ್ಲಿನ ಕುಸಿತದಿಂದಾಗಿ ಪ್ರತಿ ಕೆಜಿಗೆ 2 ರಿಂದ 3 ರೂ.ಗಳಿಗೂ ಕೇಳುವವರೇ ಇಲ್ಲದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಬೆಳೆ ಪರಿಹಾರ ಕಲ್ಪಿಸಿ:
ದರ ಕುಸಿತದಿಂದ ಕಂಗಾಲಾಗಿರುವ ಹಣ್ಣು- ತರಕಾರಿ ಬೆಳೆಗಾರರಿಗೆ ಸರ್ಕಾರ ಬೆಳೆ ಪರಿಹಾರ ನೀಡಬೇಕು. ರೈತರ ನೆರವಿಗೆ ಧಾವಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ತೋಟಗಾರಿಕೆ ಇಲಾಖೆಯಿಂದ ದರ ಕುಸಿತದಿಂದ ಬೆಳೆ ಹಾಳಾಗಿರುವುದನ್ನು ಸಮೀಕ್ಷೆ ನಡೆಸಬೇಕು. ಜತೆಗೆ ಹಣ್ಣು, ತರಕಾರಿ, ಹೂವುಗಳಿಗೆ ಬೆಂಬಲ ಬೆಲೆ ನೀಡಬೇಕು ಎಂದು ಬೆಳೆಗಾರರು ಮನವಿ ಮಾಡಿದ್ದಾರೆ.
ಮಾಯಕೊಂಡ, ಆನಗೋಡು ಹೋಬಳಿಗಳಲ್ಲಿ ಹೆಚ್ಚಾಗಿ ಹಣ್ಣು, ತರಕಾರಿ, ಹೂಗಳನ್ನು ಬೆಳೆಯುತ್ತಿದ್ದು, ಎಪಿಎಂಸಿ ಉಪ ಮಾರುಕಟ್ಟೆಯ ವಿಶಾಲ ಪ್ರಾಂಗಣದಲ್ಲಿ ಸರ್ಕಾರ ಕೋಲ್ಡ್ ಸ್ಟೋರೇಜ್ ಘಟಕವನ್ನು ನಿರ್ವಿುಸಿದರೆ ಬೆಳೆಗಳನ್ನು ಶೇಖರಿಸಿಡಲು ರೈತರಿಗೆ ಅನುಕೂಲವಾಗಲಿದೆ. | ಸಿ. ಅನಿಲ್ ಕುಮಾರ್ ನಾಯ್್ಕ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ.
ದುಬಾರಿ ವೆಚ್ಚದಲ್ಲಿ ಬೆಳೆದ ಬೆಳೆಗಳಿಗೆ ಮಾರುಕಟ್ಟೆಗಳಲ್ಲಿ ವರ್ತಕರು ನಿಗದಿತ ದರಗಳಿಗೆ ಖರೀದಿಸದೆ ಅನ್ಯಾಯ ಮಾಡುತ್ತಿದ್ದಾರೆ. ಆದ್ದರಿಂದ ಸರ್ಕಾರ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ, ಬೆಂಬಲ ಬೆಲೆಗೆ ಬೆಳೆಗಳನ್ನು ಖರೀದಿಸಿದರೆ ರೈತರ ಸಂಕಷ್ಟ ದೂರವಾಗಲಿದೆ. | ಎಂ.ಮಹೇಶ್ ಗೌಡ, ಸಿಹಿ ಕುಂಬಳ ಬೆಳೆಗಾರ