

ಬೆಳಗಾವಿ: ಮಹಿಳಾ ವಿಶ್ವವಿದ್ಯಾಲಯದ ಕಾರ್ಯಕ್ರಮದ ನಿಮಿತ್ತ ಬುಧವಾರ ವಿಜಯಪುರಕ್ಕೆ ಆಗಮಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗಾವಿಗೆ ವಾಪಸ್ ಬರುವಾಗ ಆಕಸ್ಮಿಕವಾಗಿ ಕಣ್ಣಿಗೆ ಕಾಣಿಸಿದ ಕುಟುಂಬವೊಂದಕ್ಕೆ ನೆರವು ನೀಡುವ ಮೂಲಕ ಮಾನವೀಯತೆ ತೋರಿಸಿದ್ದಾರೆ.
ವಿಜಯಪುರ-ಬಾಗಲಕೋಟೆ ಹೆದ್ದಾರಿಯ ಪಕ್ಕ ಹನಗನಹಳ್ಳಿ ಎಂಬಲ್ಲಿ ರಸ್ತೆ ಪಕ್ಕದಲ್ಲಿ ಊಟಕ್ಕೆಂದು ಸಚಿವರು ವಾಹನ ನಿಲ್ಲಿಸಿದರು. ಊಟ ಮಾಡುವಾಗ ಪಕ್ಕದಲ್ಲಿದ್ದ ಸಣ್ಣ ಮನೆಯ ಮುಂದೆ ಅಜ್ಜಿಯೊಬ್ಬಳು ಬಾಟಲಿಗಳಲ್ಲಿ ನೀರು ತುಂಬಿಸಿ ಮನೆಯ ಮುಂದೆ ಇಡುತ್ತಿದ್ದಳು. ಆ ಬಗ್ಗೆ ವಿಚಾರಿಸಿದಾಗ ರಸ್ತೆಯಲ್ಲಿ ಹೋಗುವ ಜನರು ನೀರು ಕುಡಿಯಲು ಬರುತ್ತಾರೆ. ಅವರಿಗೆ ಸಹಾಯವಾಗಲೆಂದು ಬಾಟಲಿಗಳಲ್ಲಿ ತುಂಬಿ ಇಡುವುದಾಗಿ ತಿಳಿಸಿದಳು. ಗೌರಮ್ಮ ವಾಡೇದ ಎಂಬ ಅಜ್ಜಿ ಹಾಗೂ ಜತೆಗಿದ್ದ ಮಲ್ಲು ಅವರ ಹಳ್ಳಿಯಲ್ಲಿ ಹೊಂದಿದ್ದ ಮನೆಯ ಜಾಗ ರಸ್ತೆ ಮಾಡುವಾಗ ಕೈ ತಪ್ಪಿದೆ. ಈ ಸ್ಥಳದಲ್ಲಿದ್ದ ತೋಟದ ಮಾಲಕರು ಒಂದೇ ಕೊಠಡಿಯ ಮನೆಯಲ್ಲಿ ವಾಸಿಸಲು ಅವಕಾಶ ನೀಡಿದರು.
ಈ ಮೊದಲು ಹೊಂದಿದ್ದ ಪಡಿತರ ಕಾರ್ಡ್ ಕೂಡ ಕಳೆದು ಹೋಗಿದ್ದರಿಂದ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎನ್ನುವುದು ಕೂಡ ತಿಳಿಯಿತು. ಕೂಡಲೇ ಸಚಿವರು ಸ್ವಲ್ಪಮಟ್ಟಿಗೆ ಆರ್ಥಿಕ ನೆರವು ನೀಡಿದರಲ್ಲದೆ, ಆದಷ್ಟು ಶೀಘ್ರ ರೇಷನ್ ಕಾರ್ಡ್ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣ ಬರುವಂತೆ ಮಾಡುವುದಾಗಿ ತಿಳಿಸಿ, ಸ್ಥಳದಿಂದಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.