ಕಿರು ಗುಡಿಸಲಲ್ಲಿ ಐದು ಜನರ ವಾಸ, ಕಟ್ಟು ಹೆಮ್ಮಾಡಿಯಲ್ಲಿ ಸಂಕಷ್ಟದ ಬದುಕು

poor family new
Published on

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

ದೂರದಿಂದ ನೋಡಿದರೆ ಗುಜರಿ ಜೋಪಡಿಯೋ, ದನದ ಕೊಟ್ಟಿಗೆಯೋ, ಪ್ರಾಣಿ ಕಾಯಲು ನಿರ್ಮಿಸಿದ ಹಳ್ಳಿಮನೆಯೋ ಎಂಬಂತೆ ಭಾಸವಾಗುವ ಸಣ್ಣ ಗುಡಿಸಲು. ಅದರಲ್ಲಿ ಐವರು ವಾಸ್ತವ್ಯವಿದ್ದಾರೆ. 17 ವರ್ಷಗಳಿಂದ ಇದೇ ಗುಡಿಸಲಲ್ಲಿ ಇವರ ವಾಸ್ತವ್ಯ. ಮನೆ ಯಾವಾಗ ಕುಸಿದೀತೋ ಎಂಬ ಆತಂಕ ಬೇರೆ.

ಬೈಂದೂರು ವಿಧಾನಸಭಾ ಕ್ಷೇತ್ರದ ಹೆಮ್ಮಾಡಿ ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆ ಪಕ್ಕ ವಾಸ ಮಾಡುತ್ತಿರುವ ಸುಬ್ರಾಯ ಆಚಾರ್ ಹಾಗೂ ಸತ್ಯವತಿ ಎಸ್.ಆಚಾರ್ ಬದುಕಿನ ಚಿತ್ರಣಕ್ಕೆ ಈ ಗುಡಿಸಲೇ ಸಾಕ್ಷಿ. ಸುಬ್ರಾಯ ಆಚಾರ್ ಕುಬ್ಜರಾಗಿದ್ದು, ಕಾಲಿನಲ್ಲಿ ಬಲವಿಲ್ಲ. ಹಿಂದೆ ಕೈ ಗಡಿಯಾರ, ರೇಡಿಯೊ ದುರಸ್ತಿ ಕೆಲಸ ಮಾಡುತ್ತಿದ್ದರು. ದಂಪತಿಗೆ ಇಬ್ಬರು ಗಂಡು, ಒಂದು ಹೆಣ್ಣು ಮಗಳು. ಒಬ್ಬ ಮಗ ದುಡಿಯುತ್ತಿದ್ದು, ಮತ್ತೊಬ್ಬ ಕೆಲಸ ಮಾಡಿದರೆ ಮಾಡಿದ ಇಲ್ಲದಿದ್ದರೆ ಇಲ್ಲ. ಮಗಳಿಗೂ ಲಾಕ್‌ಡೌನ್ ನಂತರ ಕೆಲಸವಿಲ್ಲ.

ಕೇಂದ್ರ ಸರ್ಕಾರ ಬಡವರಿಗಾಗಿಯೇ ಉಜ್ವಲ ಯೋಜನೆಯಲ್ಲಿ ಗ್ಯಾಸ್ ಸಂಪರ್ಕ ನೀಡುತ್ತಿದ್ದರೂ ಆಚಾರ್ ಕುಟುಂಬಕ್ಕೆ ಅದು ಸಿಕ್ಕಿಲ್ಲ. ಬಡವರಿಗಾಗಿಯೇ ಆಶ್ರಯ ಮನೆ ಯೋಜನೆ ಇದ್ದರೂ ಅರ್ಜಿ ಹಿಡಿದು ಅಲೆಯುವ ಪರಿಸ್ಥಿತಿ ತಪ್ಪಿಲ್ಲ. ಆಚಾರ್ ಸಂಪೂರ್ಣ ಅಂಗವಿಕಲರಾಗಿದ್ದರೂ ವೈದ್ಯರು ಕೊಟ್ಟ ಪ್ರಮಾಣ ಪತ್ರ ಶೇ.50. ಸದ್ಯ ಒಂದು ವರ್ಷದಿಂದ ಅಂಗವಿಕಲ ಮಾಸಾಶನವೂ ಬಂದಿಲ್ಲ.

ಹುಟ್ಟಿನಿಂದಲೇ ದೈಹಿಕ ನ್ಯೂನತೆ ಇದೆ. 17 ವರ್ಷದಿಂದ ನಮ್ಮ ಕುಟುಂಬ ಗುಡಿಸಲಲ್ಲಿ ವಾಸವಿದ್ದು, ಆಶ್ರಯ ಮನೆ ಬೇಡಿಕೆ ಸಲ್ಲಿಸಿದ್ದರೂ ಸಿಕ್ಕಿಲ್ಲ. ದೈಹಿಕ ನ್ಯೂನತೆಯಿಂದ ಕೆಲಸ ಮಾಡಲು ಆಗುತ್ತಿಲ್ಲ.

ಸುಬ್ರಾಯ ಆಚಾರ್, ಗುಡಿಸಲು ನಿವಾಸಿ, ಹೆಮ್ಮಾಡಿ

ಹೆಮ್ಮಾಡಿ ಗ್ರಾಪಂ ವಾರಕ್ಕೊಮ್ಮೆ ನೀರು ಕೊಡುತ್ತಿದ್ದು, ಕುಡಿಯಲು ಯೋಗ್ಯವಾಗಿಲ್ಲ.ಗಂಡನಿಗೆ ನಡೆಯಲು, ಭಾರ ಎತ್ತಲಾಗುವುದಿಲ್ಲ. ಒಬ್ಬ ಮಗ ಕೇರಳದಲ್ಲಿ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ನಾನು ಕೂಲಿ ಕೆಲಸಕ್ಕೆ ಹೋಗುವುದು ಅನಿವಾರ್ಯ. ದುಡಿದು ಮನೆ ಕಟ್ಟುವುದು ಕನಸಿನ ಮಾತು. ಕುಡಿಯುವ ನೀರು, ಮನೆ ಸಿಕ್ಕರೆ ಧನ್ಯರು.

ಸತ್ಯವತಿ ಎಸ್.ಆಚಾರ್, ಗುಡಿಸಲು ಮನೆ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net