

ಬೆಂಗಳೂರು: ಕಳಪೆ ರಸ್ತೆ ಡಾಂಬರೀಕರಣ ಮಾಡಿದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿನಗರ ವಲಯದ ಮೂವರು ಇಂಜಿನಿಯರಿಂಗ್‌ಗಳಿಗೆ ಬಿಬಿಎಂಪಿ ಶುಕ್ರವಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಎಕನಾಮಿಕ್ಸ್ ವಿಶ್ವವಿದ್ಯಾಲಯ, ತಂತ್ರಜ್ಞಾನ ಕೇಂದ್ರಗಳಾಗಿ ಉನ್ನತೀಕರಿಸಿದ 150 ಐಟಿಐ ಸೇರಿ ಹಲವು ಯೋಜನೆಗಳ ಉದ್ಘಾಟನೆ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರು ಆಗಮನ ಹಿನ್ನೆಲೆಯಲ್ಲಿ ಪ್ರಧಾನಿ ಸಂಚರಿಸುವ ರಸ್ತೆಗಳನ್ನು 23.5 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಅದೇ ರೀತಿ, ಪ್ರಧಾನಿ ಸಂಚರಿಸುವ ಬೆಂಗಳೂರು ವಿಶ್ವವಿದ್ಯಾಲಯದ ಆವರಣದ ಮರಿಯಪ್ಪನಪಾಳ್ಯ ಮುಖ್ಯ ರಸ್ತೆಗೆ ಡಾಂಬರೀಕರಣ ಹಾಕಲಾಗಿತ್ತು. ಪ್ರಧಾನಿ ಭೇಟಿ ನೀಡಿ 4 ದಿನ ಕಳೆಯುವಷ್ಟರಲ್ಲೇ ಹಾಕಿರುವ ಡಾಂಬರು ಕಿತ್ತು ಬಂದಿದೆ.
ಈ ಹಿನ್ನೆಲೆಯಲ್ಲಿ ಕಾರ್ಯಪಾಲಕ ಅಭಿಯಂತರ ಎಂ.ಟಿ.ಬಾಲಾಜಿ, ಸಹಾಯಕ ಕಾರ್ಯಪಾಲಕ ಎಚ್.ಜೆ.ರವಿ ಮತ್ತು ಸಹಾಯಕ ಅಭಿಯಂತರ ವಿಶ್ವಾಸ್‌ಗೆ ಪಾಲಿಕೆಯ ರಸ್ತೆ ಮತ್ತು ಮೂಲಭೂತ ಸೌಕರ್ಯ ವಿಭಾಗ ನೋಟಿಸ್ ನೀಡಿದೆ.