

ಬೆಳಗಾವಿ(ರಾಮದುರ್ಗ) : ದುಡಿಮೆ ಇದ್ದರೆ ಬಡತನ ಇರುವುದಿಲ್ಲ. ಆದ್ದರಿಂದ ಕಾಯಕ ಅವಲಂಭಿಸಿದ ರಾಜ್ಯದ ಎಲ್ಲ ಸಮುದಾಯಗಳಿಗೆ ವಿಶೇಷ ಯೋಜನೆ ಜಾರಿಗೊಳಿಸಿ, ಸೌಲಭ್ಯ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರಾಮದುರ್ಗ ತಾಲ್ಲೂಕಿನ ಬಟಕುರ್ಕಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಹಕ್ಕುಪತ್ರ ವಿತರಣಾ ಸಮಾವೇಶ, ಅನುಷ್ಠಾನ ಹಾಗೂ ಅರಿವು ಕಾರ್ಯಕ್ರಮದಲ್ಲಿ ವಿವಿಧ ತಾಂಡಗಳ ನಿವಾಸಿಗಳಿಗೆ ಜಿಲ್ಲೆಯ ಒಟ್ಟು 11,600 ಜನರ ಪೈಕಿ ಕೆಲ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ಹಿಂದಿನಂತೆ ಬಾಯಿಮಾತಿನಲ್ಲಿ ಪರಿಹಾರ ನೀಡುವ ಸರ್ಕಾರ ಇದಲ್ಲ; ಪ್ರತಿ ಸಂದರ್ಭದಲ್ಲಿ ತ್ವರಿತವಾಗಿ ಸ್ಪಂದಿಸುವ ಮೂಲಕ ಜನರ ಸಮಸ್ಯೆಗಳ ನಿವಾರಣೆಗೆ ಶ್ರಮಿಸಲಾಗಿದೆ ಎನ್ನುತ್ತಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಿಂದ ನೀಡಿದ ಅನುದಾನ, ಪರಿಹಾರ ಹಾಗೂ ಸೌಲಭ್ಯಗಳ ಕುರಿತು ವಿವರಿಸಿದ ಸಿಎಂ ಬೊಮ್ಮಾಯಿ ವಿವರಿಸಿದರು.
ಬೆಳೆಹಾನಿ ಪರಿಹಾರವಾಗಿ ಕೇಂದ್ರ ಸರಕಾರ ನೀಡುವ ಪರಿಹಾರಧನದ ಎರಡು ಪಟ್ಟು ಪರಿಹಾರವನ್ನು ರಾಜ್ಯ ಸರಕಾರ ನೀಡಿರುವುದು ದೇಶದಲ್ಲೇ ಮೊದಲು. ಇದು ನಮ್ಮ ಸರ್ಕಾರದ ಬದ್ಧತೆಯಾಗಿದೆ. ಸ್ತ್ರೀಶಕ್ತಿ ಸಂಘಗಳಿಗೆ ಐದು ಲಕ್ಷ ರೂ., ಸ್ವಾಮಿ ವಿವೇಕಾನಂದ ಯೋಜನೆಯಡಿ ಪ್ರತಿ ಗ್ರಾಮದ ಎರಡು ಯುವಕ ಸಂಘಗಳಿಗೆ ತಲಾ ಐದು ಲಕ್ಷ ನೆರವು ನೀಡಿ, ಸ್ವಯಂ ಉದ್ಯೋಗ ಕೈಗೊಳ್ಳಲು ಅವಕಾಶ ಕಲ್ಪಿಸಲಾಗುವುದು. ಅಲ್ಲದೇ, ಶಾಲಾ ಮಕ್ಕಳಿಗಾಗಿಯೇ ವಿಶೇಷವಾಗಿ ಎರಡು ಸಾವಿರ ಬಸ್‌ಗಳನ್ನು ನೀಡಲು ಸರ್ಕಾರ ತೀರ್ಮಾನಿಸಿದೆ ಎಂದರು.
ಗ್ಯಾಸ್ ಸಂಪರ್ಕ, ವಿದ್ಯುತ್ ಸೇರಿದಂತೆ ಒಂದು ಕುಟುಂಬಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿವೆ. 13 ಲಕ್ಷ ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆಯ ಲಾಭ ದೊರೆತಿದೆ. ಇದರಲ್ಲಿ ಬೆಳಗಾವಿ ಜಿಲ್ಲೆಯ ಒಂದು ಲಕ್ಷಕ್ಕೂ ಅಧಿಕ ರೈತರ ಮಕ್ಕಳಿಗೆ ಈ ಯೋಜನೆಯ ಲಾಭ ಲಭಿಸಿದೆ. ಜಲಜೀವನ ಮಿಷನ್ ಯೋಜನೆಯಡಿ ದೇಶದ 12 ಕೋಟಿ ಮನೆಗಳಿಗೆ ಹಾಗೂ ರಾಜ್ಯದಲ್ಲಿ ಮೂರು ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನೀರು ಒದಗಿಸಲಾಗಿದೆ. ಇನ್ನೂ 25 ಲಕ್ಷ ಮನೆಗಳಿಗೆ ನಳದ ಮೂಲಕ ಕುಡಿಯುವ ನೀರು ಒದಗಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಮಲಪ್ರಭೆ ನದಿತೀರದಲ್ಲಿ ಪ್ರವಾಹಹಾನಿ ತಪ್ಪಿಸಲು 125 ಕೋಟಿ ರೂ.ವೆಚ್ಚದಲ್ಲಿ ರಕ್ಷಣಾ ಗೋಡೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಪಿಎಂ-ಕಿಸಾನ್ ಯೋಜನೆಯಡಿ 5.61 ಲಕ್ಷ ರೈತರ ಖಾತೆಗೆ 1130 ಕೋಟಿ ಹಣವನ್ನು ಸ್ವತಃ ಪ್ರಧಾನಮಂತ್ರಿ ಮೋದಿ ಅವರೆ ನೇರವಾಗಿ ರೈತರ ಖಾತೆಗೆ ಹಣ ಜಮೆ ಮಾಡಿದ್ದಾರೆ. ಅಲ್ಲದೇ, ಪ್ರಧಾನಮಂತ್ರಿಗಳು ಇತ್ತೀಚಿಗೆ ಕಲಬುರಗಿಯಲ್ಲಿ 50 ಸಾವಿರಕ್ಕೂ ಅಧಿಕ ಜನರಿಗೆ ಹಕ್ಕುಪತ್ರ ನೀಡಿರುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ದಾವಣಗೆರೆಯಲ್ಲಿ ಇನ್ನೂ 50 ಸಾವಿರ ಜನರಿಗೆ ಹಕ್ಕುಪತ್ರ ವಿತರಿಸಲಿದ್ದಾರೆ ಎಂದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಮಾತನಾಡಿ, ರೈಲು ಯೋಜನೆ, ನೀರಾವರಿ ಯೋಜನೆಗಳಿಗೆ ಸಾಕಷ್ಟು ಆದ್ಯತೆ ನೀಡಿದ್ದಾರೆ. ಸಂಗೊಳ್ಳಿಯ ಸೈನಿಕ ಶಾಲೆ, ಬೆಳಗಾವಿಯಲ್ಲಿ ಕಿದ್ವಾಯಿ ಆಸ್ಪತ್ರೆ, ಕಿತ್ತೂರು-ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆ ಸೇರಿದಂತೆ ಹತ್ತಾರು ಯೋಜನೆಗಳನ್ನು ಬೆಳಗಾವಿ ಜಿಲ್ಲೆಗೆ ನೀಡಿದ್ದಾರೆ ಎಂದರು.