![KRUSHI]](http://media.assettype.com/vijayavani-media%2Fimport%2Fcdn.vvimgs.com%2Fwp-content%2Fuploads%2F2023%2F06%2FKRUSHI-1.jpg?w=480&auto=format%2Ccompress&fit=max)
![KRUSHI]](http://media.assettype.com/vijayavani-media%2Fimport%2Fcdn.vvimgs.com%2Fwp-content%2Fuploads%2F2023%2F06%2FKRUSHI-1.jpg?w=480&auto=format%2Ccompress&fit=max)
ಸಿರಗುಪ್ಪ: ಮುಂಗಾರು ಆರಂಭಗೊಂಡು ತಿಂಗಳು ಕಳೆಯುತ್ತಾ ಬಂದರೂ ಮಳೆರಾಯನ ದರ್ಶನ ಇಲ್ಲವಾಗಿದೆ. ಇದರಿಂದ ಕೃಷಿ ಚಟುವಟಿಕೆ ಇಲ್ಲದೆ ರೈತರು ಕೈಕಟ್ಟಿ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಬಾರಿ ಮುಂಗಾರು ಮಳೆ ಉತ್ತಮವಾಗಿದ್ದರಿಂದ ಜೂನ್ ಅಂತ್ಯದ ವೇಳೆಗೆ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿದ್ದವು. ಈ ಬಾರಿ ಜೂನ್ ಮುಗಿಯುತ್ತಾ ಬಂದರೂ ವಾಡಿಕೆ ಮಳೆ ಆಗದೆ ರೈತರನ್ನು ಚಿಂತಗೀಡುಮಾಡಿದೆ. ಕಳೆದ ಮೂರು ವರ್ಷ ವಾಡಿಕೆಗಿಂತ ಹೆಚ್ಚು ಮಳೆ ಸುರಿಸಿದ ವರುಣ, ಈ ಬಾರಿ ಇನ್ನೂ ಸದ್ದು ಮಾಡಿಲ್ಲ. 2021ರ ಜೂನ್ ಅಂತ್ಯಕ್ಕೆ ವಾಡಿಕೆ ಮಳೆ 154 ಎಂಎಂಗಿಂತ 177ಮಿಮೀ ಮಳೆಯಾಗಿತ್ತು. 2022ರ ಜೂನ್ ಅಂತ್ಯಕ್ಕೆ ವಾಡಿಕೆ ಮಳೆ 154 ಎಂಎಂಗಿಂತ 199 ಎಂ.ಎಂ. ಮಳೆ ಬಿದ್ದಿತ್ತು. ಪ್ರಸಕ್ತ ಜೂನ್ ಅಂತ್ಯಕ್ಕೆ ವಾಡಿಕೆ ಮಳೆ 122 ಎಂಎಂಗಿಂತ ಕೇವಲ 55 ಮಿಮೀ ಸುರಿದಿದೆ. ಹೀಗಾಗಿ 70 ಎಂಎಂ ಮಳೆ ಕೊರತೆಯಾಗಿದೆ.
ಕಳೆದ ವರ್ಷ ಜೂನ್ ಆರಂಭದಲ್ಲಿಯೇ ಉತ್ತಮ ಮಳೆಯಾಗಿದ್ದರಿಂದ ಭತ್ತ ನಾಟಿ ಕಾರ್ಯವೂ ಚುರುಕುಗೊಂಡು ಸುಮಾರು 565 ಹೆಕ್ಟೇರ್ ನಾಟಿಯಾಗಿತ್ತು. ಹತ್ತಿ ಅತಿ ಹೆಚ್ಚಿನ ಪ್ರಮಾಣದಲ್ಲಿ (ಸುಮಾರು 4470 ಹೆಕ್ಟೇರ್) ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ತೊಗರಿ 250, ಸೂರ್ಯಕಾಂತಿ 280, ಸಜ್ಜೆ 50, ನವಣೆ 70 ಹೆಕ್ಟೇರ್ ಸೇರಿದಂತೆ ಇತರ ಬೆಳೆಗಳು ಸೇರಿ ತಾಲೂಕಿನಲ್ಲಿ ಒಟ್ಟು 5500 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿತ್ತು. ಪ್ರಸಕ್ತ ವರ್ಷ ಮಳೆಯ ಕೊರತೆಯಿಂದ ಅಲ್ಪ ಪ್ರಮಾಣದ ನೀರು ಬಳಕೆ ಮಾಡಿಕೊಂಡು 450 ಹೆಕ್ಟೇರ್ ಹತ್ತಿ ಹಾಗೂ 45 ಹೆಕ್ಟೇರ್ ಸೂರ್ಯಕಾಂತಿ ಬಿಟ್ಟರೆ ಇತರ ಬೆಳೆಗಳು ಬಿತ್ತನೆಯಾಗದೆ ಮಳೆಗಾಗಿ ಎದುರು ನೋಡುತ್ತಿವೆ.
ತಾಲೂಕಿನ ಜೀವನಾಡಿ ತುಂಗಭದ್ರಾ ನದಿ, ವೇದಾವತಿ ಹಗರಿಯಿಂದ ಸ್ವತಃ ಕೃಷಿ ಪಂಪ್ಸೆಟ್ಗಳನ್ನು ಬಳಸಿಕೊಂಡು ಏಪ್ರಿಲ್ ಹಾಗೂ ಮೇನಲ್ಲಿ ಹತ್ತಿ ನಾಟಿ ಮಾಡಿದ್ದ ರೈತರು ಈ ಬಾರಿ ಬಿಸಿಲಿನ ತಾಪ ತಾಳಲಾರದೆ ತೀವ್ರ ನಷ್ಟಕ್ಕೆ ಈಡಾಗಿದ್ದಾರೆ. ಹತ್ತಿ ರಕ್ಷಣೆಗೆ ಸಾವಿರಾರು ರೂ. ವೆಚ್ಚ ಮಾಡಿದರೂ ಪ್ರಯೋಜನವಾಗದೆ ನಾಶ ಪಡಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಅಗತ್ಯ ಬೀಜ ಮತ್ತು ರಸಗೊಬ್ಬರ ದಾಸ್ತಾನು ಇದೆ. ಆದರೆ, ಮಳೆ ಬಾರದೆ ರೈತರು ಕೆಲಸವಿಲ್ಲದಂತಾಗಿ ಕೈಕಟ್ಟಿಕುಳಿತಿದ್ದಾರೆ ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಬಿ.ಪಾಟೀಲ್.
ಏಪ್ರಿಲ್ ಅಂತ್ಯದಲ್ಲಿಯೇ ಉತ್ತಮ ಮಳೆಯಾಗುವ ನಿರೀಕ್ಷೆಯೊಂದಿಗೆ ಹತ್ತು ಎಕರೆ ಪ್ರದೇಶದಲ್ಲಿ ಹತ್ತಿ ನಾಟಿ ಮಾಡಿ ಸಾವಿರಾರು ರೂ. ವೆಚ್ಚ ಮಾಡಿ ನಿರ್ವಹಣೆ ಮಾಡಿದ್ದೇವೆ. ಆದರೆ, ಅತಿಯಾದ ಬಿಸಿಲಿನ ತಾಪದಿಂದ ಬೆಳೆ ಸಂಪೂರ್ಣ ಹಾಳಾಗಿದ್ದು, ಬೆಳೆ ಕಿತ್ತು ಹಾಕುವಂತ ಅನಿವಾರ್ಯತೆ ನಿರ್ಮಾಣವಾಗಿದೆ.
ಯರೆಪ್ಪಗೌಡ
ರೈತ, ಕರ್ಚಿಗನೂರು