ಪೂನಾ ಒಪ್ಪಂದ ನವ ಭಾರತಕ್ಕೆ ನಾಂದಿ: ಪ್ರೊ.ರಹಮತ್ ತರೀಕೆರೆ ವಿಶ್ಲೇಷಣೆ

mysore
Published on

ಮೈಸೂರು: ಪೂನಾ ಒಪ್ಪಂದದ ವಾಗ್ವಾದವನ್ನು ಕೇವಲ ರಾಜಕೀಯ ದೃಷ್ಟಿಕೋನದಿಂದ ಗ್ರಹಿಸಬಾರದು. ಇದನ್ನು ವರ್ತಮಾನದ ರಾಜಕೀಯ ಸಮಸ್ಯೆಗಳ ದೃಷ್ಟಿಕೋನದಲ್ಲಿ ಆಲೋಚಿಸಬೇಕು ಎಂದು ಹಿರಿಯ ಸಾಹಿತಿ ಪ್ರೊ.ರಹಮತ್ ತರೀಕೆರೆ ಹೇಳಿದರು.


ಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಪೂನಾ ಒಪ್ಪಂದ; ಒಂದು ನೋಟ’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.


ಗಾಂಧೀಜಿ ಅವರ ಪ್ರಾಣ ಕಾಪಾಡುವ ಉದ್ದೇಶದಿಂದ ಚಾರಿತ್ರಿಕ ಒತ್ತಡಕ್ಕೆ ಮಣಿದು ಡಾ. ಅಂಬೇಡ್ಕರ್ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದರು. ನಂತರ ಆದ ನೋವು, ಸಂಕಷ್ಟ, ನಿರಾಸೆಯಿಂದ ಭಾರತದ ಪರಿಕಲ್ಪನೆ ಬದಲಾಯಿತು. ಇದರಿಂದ ಸಂವಿಧಾನ ರೂಪುಗೊಂಡಿತು. ಬುದ್ಧ ಧರ್ಮ ಸ್ವೀಕರಿಸಿದರು. ಹೀಗೆ ದಮನಿತರ ವಿಮುಕ್ತಿಗೆ ಹಲವಾರು ನಿರ್ಧಾರ ಮಾಡಿದರು. ಹೀಗಾಗಿ ಪೂನ ಒಪ್ಪಂದವನ್ನು ನಾವು ನವ ಭಾರತದ ನಿರ್ಮಾಣದ ಸಂಸ್ಕರಣೆ ವಿಷಯವಾಗಿ ನೋಡಬೇಕು ಎಂದರು.


ಪೂನಾ ಒಪ್ಪಂದದಲ್ಲಿ ದಲಿತ ಪದ ಬಳಕೆಯಾಗಿಲ್ಲ. ಸಮಾಜದ ತಳಸ್ತರದ ನಿಮ್ನ ವರ್ಗ ಜನರಿಗೆ ಪ್ರತ್ಯೇಕ ಮತಕ್ಷೇತ್ರ, ಪ್ರತ್ಯೇಕ ಮತದಾನ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಡಾ. ಅಂಬೇಡ್ಕರ್ ವಾದವಾಗಿತ್ತು, ಇದನ್ನು ತಿರಸ್ಕರಿಸಲಾಯಿತು. ಬಳಿಕ ಪೂನಾ ಒಪ್ಪಂದ ಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಅಂಬೇಡ್ಕರ್ ಮತ್ತು ಗಾಂಧೀಜಿ ಅವರನ್ನು ಮುಖಾಮುಖಿಯಾಗಿಸಿ ದೇಶ ಕಟ್ಟುವ ಚಿಂತನೆ ನಡೆಸಬೇಕೆ ಹೊರತು ಒಬ್ಬರನ್ನು ನಾಯಕರನ್ನಾಗಿ, ಮತ್ತೊಬ್ಬರನ್ನು ಖಳನಾಯಕರನ್ನಾಗಿ ನೋಡಬಾರದು. ಅವರಿಬ್ಬರು ಮಾರ್ಗಗಳು ಬೇರೆಯಾದರು, ಅವರಿಬ್ಬರ ಚಿಂತನೆ ದೇಶ ಕಟ್ಟಲು ಅತ್ಯಂತ ಅವಕಶ್ಯವಾಗಿದ್ದು, ಇತಿಹಾಸದಿಂದ ಪಾಠ ಕಲಿಯಬೇಕು ಎಂದರು.


ಮೈವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ನವ ಭಾರತದ ಚರಿತ್ರೆಯಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರ್ ಅವರು ವಿಶೇಷ ಸ್ಥಾನಮಾನದಲ್ಲಿ ನಿಲ್ಲುತ್ತಾರೆ. ಇವರಿಬ್ಬರ ಸಾಮಾಜಿಕ-ಆರ್ಥಿಕ ಹಿನ್ನೆಲೆ ಬೇರೆಯಾಗಿದ್ದರೂ ಹೊಸ ಭಾರತದ ನಿರ್ಮಾಣದಲ್ಲಿ ದೇಶವನ್ನು ಒಗ್ಗೂಡಿಸುವ ಆಶಯದೊಂದಿಗೆ ಪರಿಶ್ರಮಿಸಿದವರು ಎಂದರು.


ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್, ಮೈವಿವಿ ಗಾಂಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ನರೇಂದ್ರ ಕುಮಾರ್ ಇನ್ನಿತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net