

ಚನ್ನರಾಯಪಟ್ಟಣ : ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಹೆಚ್ಚಾಗಬೇಕು ಎಂದು ಪುರಸಭಾ ಸದಸ್ಯೆ ರೇಖಾ ಅನಿಲ್ ಹೇಳಿದರು.
ಪಟ್ಟಣದ ಖಾಸಗಿ ಸಭಾಂಗಣದಲ್ಲಿ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಮಹಿಳೆಯರನ್ನು ಸಂಘಟಿಸುವ ಮೂಲಕ ಅವರು ಶಿಸ್ತಿನ ಜೀವನ ನಡೆಸಲು ಯೋಜನೆ ಸಹಕಾರ ನೀಡುತ್ತಿದೆ. ಯೋಜನೆ ಪ್ರಾರಂಭವಾದ ಬಳಿಕ ಸಮಾಜದಲ್ಲಿ ಸಾಕಷ್ಟು ಸುಧಾರಣೆ ಆಗಿವೆ. ಮಹಿಳಾ ಸಬಲೀಕರಣವಾಗಿದೆ ಎಂದವರು ಶ್ಲಾಘಿಸಿದರು.
ಸಂಬಂಧ ವೃದ್ಧಿಸುವ ಕಾರ್ಯ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಮಾತನಾಡಿ, ಸಾಮೂಹಿಕವಾಗಿ ಸತ್ಯನಾರಾಯಣ ಪೂಜೆ, ಲಕ್ಷ್ಮೀ ಪೂಜೆ ಮತ್ತು ಗಣೇಶೋತ್ಸವ ಆಚರಣೆಗಳು ಪರಸ್ಪರ ಸಂಬಂಧ ವೃದ್ಧಿಸುತ್ತವೆ. ಸಮುದಾಯಗಳ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಾದ ಗ್ರಾಮಾಭ್ಯುದಯ, ಆರ್ಥಿಕ ಸಬಲತೆ, ಕೃಷಿ, ಸಾಮಾಜಿಕ ಕ್ಷೇತ್ರ, ಜನರ ಜೀವನಮಟ್ಟ ಸುಧಾರಣೆ ಸೇರಿದಂತೆ ಹಲವು ಸಮಾಜಮುಖಿ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುತ್ತವೆ ಎಂದರು.
ಶ್ರೀ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ, ಜಿಪಂ ಮಾಜಿ ಸದಸ್ಯೆ ಕುಸುಮಾ, ಪುರಸಭಾ ಸದಸ್ಯರಾದ ಸಿ.ಎನ್. ಶಶಿಧರ, ಎಚ್.ಎನ್.ನವೀನ್, ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯರಾದ ಮನೋಹರ, ಪ್ರಭಾಕರ ಶೆಣೈ, ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ, ಜಿಲ್ಲಾ ಯೋಜನಾಧಿಕಾರಿ ತಿಲಕ್, ಮೇಲ್ವಿಚಾರಕ ರಾಘವೇಂದ್ರ ಪೂಜಾರಿ ಇತರರು ಇದ್ದರು.