

ಯಳಂದೂರು : ತಾಲೂಕಿನ ಗಂಗವಾಡಿ ಗ್ರಾಮದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹಮ್ಮಿಕೊಂಡಿದ್ದ ಗುಂಬಳ್ಳಿ ವಲಯದ ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜೆ ಯಶಸ್ವಿಯಾಗಿ ನೆರವೇರಿತು.
ಯೋಜನೆಯ ಜಿಲ್ಲಾ ನಿರ್ದೇಶಕಿ ಲತಾ ಬಂಗೇರಾ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪ್ರತಿ ವರ್ಷವೂ ವಿವಿಧೆಡೆ ಇಂತಹ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುತ್ತದೆ. ಸಂಸ್ಥೆ ವತಿಯಿಂದ ಮಹಿಳಾ ಸಬಲೀಕರಣದ ಜೊತೆಗೆ ನಮ್ಮ ದೇಶದ ಸಂಸ್ಕೃತಿ ಹಾಗೂ ಸಂಸ್ಕಾರಗಳ ಅರಿವು ಮೂಡಿಸುವುದು ಇದರ ಉದ್ದೇಶ ಎಂದರು.
ನಮ್ಮ ಸಂಸ್ಥೆಯಿಂದ ಸಾಲ ಪಡೆದ ಮಹಿಳೆಯರು ಕುಟುಂಬದಲ್ಲಿ ಆರ್ಥಿಕ ಸಬಲತೆ ಸಾಧಿಸಿದ್ದಾರೆ. ಅತ್ಯಂತ ಕಡಿಮೆ ದಾಖಲಾತಿಗಳನ್ನು ಬಳಸಿಕೊಂಡು ಸಾಲ ನೀಡುವುದರಿಂದ ಇದರ ಸುಲಭ ಮರುಪಾವತಿಯೂ ಆಗುತ್ತದೆ. ಲಕ್ಷಾಂತರ ಕುಟುಂಬಗಳು ರಾಜ್ಯದಲ್ಲಿ ಇದರ ಲಾಭ ಪಡೆದುಕೊಂಡಿವೆ ಎಂದರು.
ಸಂಸಾರದಲ್ಲಿರುವ ಜಂಜಾಟಗಳಿಂದ ಕೊಂಚ ನೆಮ್ಮದಿಯನ್ನು ಪಡೆದುಕೊಳ್ಳಬೇಕಾದರೆ ಧಾರ್ಮಿಕ ಮಾರ್ಗ ಅತ್ಯಂತ ಸುಲಭ. ಸಾಮೂಹಿಕ ಸತ್ಯನಾರಾಯಣ ಪೂಜೆ ಇದಕ್ಕೆ ಪೂರಕವಾಗಿದೆ ಎಂದರು.
ರೇಚಂಬಳ್ಳಿ ಸಿದ್ಧಮಲ್ಲೇಶ್ವರ ಪಟ್ಟದ ಮಠದ ಶ್ರೀ ಮಹಾದೇವ ಸ್ವಾಮಿಜಿ ಮಾತನಾಡಿದರು. ಇರಸವಾಡಿ ಗ್ರಾಪಂ ಅಧ್ಯಕ್ಷೆ ಚಿನ್ನಮ್ಮ, ದುಗ್ಗಹಟ್ಟಿ ಪಿ. ವೀರಭದ್ರಪ್ಪ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಆರ್. ವೆಂಕಟರಂಗಯ್ಯ ಕಾಳೇಗೌಡ, ತಾಲೂಕು ಯೋಜನಾಧಿಕಾರಿ ಪ್ರವೀಣ್ ನಾರಾಯಣ, ಗ್ರಾಪಂ ಸದಸ್ಯ ವಸಂತ್‌ಕುಮಾರ್ ಇತರರು ಇದ್ದರು.