ಸುಮಂಗಲಿಯರಿಂದ ಸ್ವರ್ಣಗೌರಿಗೆ ಬಾಗಿನ

ಚನ್ನರಾಯಪಟ್ಟಣದ ಶ್ರೀ ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸ್ವರ್ಣಗೌರಿಗೆ ಸುಮಂಗಲಿಯರು ಬಾಗಿನ ಅರ್ಪಿಸಿದರು.
ಚನ್ನರಾಯಪಟ್ಟಣದ ಶ್ರೀ ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸ್ವರ್ಣಗೌರಿಗೆ ಸುಮಂಗಲಿಯರು ಬಾಗಿನ ಅರ್ಪಿಸಿದರು.
Published on

ಚನ್ನರಾಯಪಟ್ಟಣ: ತಾಲೂಕಿನಾದ್ಯಂತ ಮಂಗಳವಾರ ಗೌರಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಸಂಪ್ರದಾಯದಂತೆ ಸಾರ್ವನಿಕರು ಮನೆಯಲ್ಲಿ ಗೌರಿ ಕಳಸ ಪ್ರತಿಷ್ಠಾಪಿಸಿ ಇಷ್ಟಾರ್ಥ ಸಿದ್ಧಿಗೆ ಪೂಜೆ ಸಲ್ಲಿಸಿದರು. ನಗರದ ಹಲವು ದೇವಸ್ಥಾನಗಳಲ್ಲಿ ಗೌರಿ ಮೂರ್ತಿ ಇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಕೋಟೆ ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ಸಂಕಷ್ಟಹರ ಗಣಪತಿ ಸಮೇತ ಸಾಂಬ ಸದಾಶಿವ, ಶನೇಶ್ವರ ಮತ್ತು ಪರಿವಾರ ದೇವತೆಗಳಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಸೇವೆಗಳು ನಡೆದವು. ಗೌರಿ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀ ಸಂಕಷ್ಟಹರ ಗಣಪತಿ ದೇವಾಲಯದಲ್ಲಿ ಪ್ರಧಾನ ಅರ್ಚಕ ಎಸ್. ಸುದರ್ಶನ ಶರ್ಮ ಅವರ ನೇತೃತ್ವದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ ಗುಡಿಯಲ್ಲಿ ಸಾಲಿನಲ್ಲಿ ನಿಂತು ಸುಮಂಗಲಿಯರು ಗೌರಿಗೆ ಪೂಜೆ ಸಲ್ಲಿಸಿದರು. ನೂರಾರು ಮಹಿಳೆಯರು ಸ್ವರ್ಣ ಗೌರಿಗೆ ಬಾಗಿನ ಸಲ್ಲಿಸಿ ಎಳೆ ಕಟ್ಟಿಸಿಕೊಂಡರು.

ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮಹಿಳೆಯರು ಗೌರಿ ಪೂಜೆಯಲ್ಲಿ ಭಾಗವಹಿಸಿದ್ದರು. ಬುಧವಾರ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುವುದು ಎಂದು ಎಂದು ದೇವಸ್ಥಾನದ ಪ್ರಧಾನಚಕ ಎಸ್. ಸುದರ್ಶನ ಶರ್ಮ ತಿಳಿಸಿದರು.

ಇತಿಹಾಸ ಪ್ರಸಿದ್ಧ ಚಂದ್ರಮೌಳೇಶ್ವರ ದೇವಸ್ಥಾನದಲ್ಲೂ ಗೌರಿ ಪೂಜೆ ನಡೆಯಿತು. ಮಹಿಳೆಯರು ಭಾಗವಹಿಸಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

ಮದುವೆಯಾಗಿ ಗಂಡನ ಮನೆ ಸೇರಿದ್ದ ಮನೆ ಮಗಳಿಗೆ ತವರಿಗೆ ಆಹ್ವಾನಿಸಿ ಹೊಸ ಬಟ್ಟೆ, ನಗದು ಸಹಿತ ಬಾಗಿನದ ಉಡುಗೊರೆ ನೀಡಲಾಯಿತು. ಮನೆಯಲ್ಲಿ ಹಬ್ಬದ ಅಂಗವಾಗಿ ವಿಶೇಷ ಖಾದ್ಯಗಳನ್ನು ತಯಾರಿಸಲಾಗಿತ್ತು.

ಹಬ್ಬಕ್ಕೆ ಖರೀದಿ ಜೋರು:ಸ್ವರ್ಣಗೌರಿ ಹಬ್ಬದ ಆಚರಣೆಯಲ್ಲಿ ನಿರತರಾಗಿದ್ದರೆ ಯುವಕರು ಮತ್ತು ಮಕ್ಕಳು ಗಣೇಶ ಹಬ್ಬದ ಆಚರಣೆಗೆ ಭರದಿಂದ ಸಿದ್ಧತೆ ನಡೆಸಿದ್ದರು. ಎಲ್ಲಿ ನೋಡಿದರೂ ಗಣೇಶ ಮೂರ್ತಿಗಳ ಖರೀದಿ, ಗಣೇಶ ಪ್ರತಿಷ್ಠಾಪನೆಗೆ ಅಗತ್ಯವಾದ ಹಣ್ಣುಗಳು, ಮಂಟಪ ಅಲಂಕರಿಸಲು ಕಬ್ಬು, ಬಾಳೆಕಂದು, ಮಾವಿನ ಸೊಪ್ಪುಗಳ ಸಂಗ್ರಹದಲ್ಲಿ ತೊಡಗಿಸಿಕೊಂಡರು. ಇದರಿಂದ ಪಟ್ಟಣದ ಗಣೇಶ ಹಬ್ಬ ಚಿಕ್ಕ ಅಂಗಡಿ, ದೊಡ್ಡ ಅಂಗಡಿ ಬೀದಿ ಹಾಗೂ ಮಾರುಕಟ್ಟೆ ಗ್ರಾಹಕರಿಂದ ಗಿಜಿಗಿಡುತ್ತಿತ್ತು. ಹೂ, ಹಣ್ಣುಗಳ ದರ ಗಗನಕ್ಕೇರಿದ್ದರೂ ಜನರ ಖರೀದಿ ಉತ್ಸಾಹಕ್ಕೆ ಕುಂದುಂಟಾಗಲಿಲ್ಲ. ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು.

ಪಟ್ಟಣ ಹಾಗೂ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಸಾರ್ವಜನಿಕವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವವರು ಮುಂಚಿತವಾಗಿಯೇ ಗಣಪನನ್ನು ಕಂಡೊಯ್ಯುತ್ತಿದ್ದ ದೃಶ್ಯಗಳು ಕಂಡುಬಂದವು. ಪರಿಸರ ಕಾಳಜಿಯ ಬಗ್ಗೆ ಹೆಚ್ಚುತ್ತಿರುವ ಜಾಗೃತಿಯ ಪರಿಣಾಮ ಈ ವರ್ಷ ಮಣ್ಣಿನ ಗಣಪತಿ ಮೂರ್ತಿಗಳ ಖರೀದಿಗೆ ಸಾರ್ವಜನಿಕರು ಹೆಚ್ಚು ಉತ್ಸಾಹ ತೋರಿದ್ದು ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net