

ಶೃಂಗೇರಿ: ಪ್ರಥಮ ಶ್ರಾವಣ ಸೋಮವಾರ ಪ್ರಯುಕ್ತ ನರಸಿಂಹವನದ ಗುರುನಿವಾಸದಲ್ಲಿ ಆ.21ರ ಮಧ್ಯಾಹ್ನ ಮಠದ ಜಗದ್ಗುರುಗಳಿಂದ ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಲಿದೆ. ಯತಿಗಳು ಸಲ್ಲಿಸುವ ವಿಶೇಷ ಪೂಜೆಯಲ್ಲಿ ವಿವಿಧೆಡೆಯ ಭಕ್ತರು ಪಾಲ್ಗೊಳ್ಳಲಿದ್ದಾರೆ.
ಜಗದ್ಗುರುಗಳು ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ವಿವಿಧ ಲ, ಪುಷ್ಪ್ಪ ಸಮರ್ಪಿಸಿದ ಬಳಿಕ ಪಂಚಾಮೃತಾಭಿಷೇಕಗಳಿಂದ ವಿಶೇಷ ಪೂಜೆ ಸಲ್ಲಿಸುತ್ತಾರೆ. ನಂತರ ಚಿನ್ನದ ಮಂಟಪದಲ್ಲಿ ಶ್ರೀ ಚಂದ್ರಮೌಳೀಶ್ವರ, ರತ್ನಗರ್ಭಗಣಪತಿ, ಆದಿಶಂಕರಾಚಾರ್ಯರು, ಸರಸ್ವತೀ, ಮಹಾಲಕ್ಷ್ಮೀ, ಬಂಗಾರದ ಮತ್ತು ಸ್ಫಟಿಕದ ಶ್ರೀಚಕ್ರಗಳು, ಸೀತಾರಾಮ, ಗಣಪತಿ, ಜಗದ್ಗುರುಗಳಾದ ಶ್ರೀ ನರಸಿಂಹಭಾರತೀ ಹಾಗೂ ಶ್ರೀ ಸಚ್ಚಿದಾನಂದ ಸ್ವಾಮೀಜಿಗಳ ಪಾದುಕೆಗಳಿಗೆ ಪೂಜೆ ನೆರವೇರಿಸುತ್ತಾರೆ.
ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಪ್ರತಿದಿನ ತ್ರಿಕಾಲಪೂಜೆ ನಡೆಯುತ್ತದೆ. ಬೆಳಗ್ಗೆ ಹಾಗೂ ಮಧ್ಯಾಹ್ನದ ಪೂಜೆಯನ್ನು ಅರ್ಚಕರು ಸಲ್ಲಿಸಿದರೆ, ರಾತ್ರಿ ಜಗದ್ಗುರುಗಳು ಪೂಜೆ ನೆರವೇರಿಸುತ್ತಾರೆ. ಆದರೆ ಶ್ರಾವಣ ಹಾಗೂ ಕಾರ್ತಿಕ ಮಾಸದ ಸೋಮವಾರ ಮಧ್ಯಾಹ್ನ ಶ್ರೀಗಳು ಸಲ್ಲಿಸುವ ಪೂಜೆಯನ್ನು ವೀಕ್ಷಿಸಲು ಭಕ್ತರು ಕಾಯುತ್ತಾರೆ. ಶ್ರೀ ಆದಿಶಂಕರರಿಂದ ಮೊದಲ್ಗೊಂಡು ಮೂವತ್ತೇಳು ಯತಿವರೇಣ್ಯರಿಂದ ಪೂಜಿಸಲ್ಪಡುವ ಶ್ರೀ ಚಂದ್ರಮೌಳೀಶ್ವರನನ್ನು ದರ್ಶಿಸಲು ಜನ್ಮಾಂತರದ ಪುಣ್ಯವಿರಬೇಕು ಎಂಬ ನಂಬಿಕೆ ಇದೆ.
ಶ್ರೀ ಶಂಕರರು ಕೈಲಾಸಕ್ಕೆ ತೆರಳಿ ಶ್ರೀ ಚಂದ್ರಮೌಳೀಶ್ವರ ಸ್ವಾಮಿ ಹಾಗೂ ರತ್ನಗರ್ಭಗಣಪತಿಯನ್ನು ಶಿವನಿಂದ ಪಡೆದರು ಎಂಬ ಐತಿಹ್ಯವಿದೆ. ಶ್ರೀ ಆದಿಶಂಕರ ಭಗತ್ಪಾದರು ಮಠದಲ್ಲಿ ಪ್ರತಿದಿನ ಭಗವತ್ ಆರಾಧನೆ ನಡೆಸುವ ಸಂಕಲ್ಪದಿಂದ ಶ್ರೀ ಶಾರದಾಂಬೆ ಹಾಗೂ ಶ್ರೀ ಚಂದ್ರಮೌಳೀಶ್ವರರ ಪೂಜೆ ನಡೆಸಬೇಕು ಎಂಬ ಅಪ್ಪಣೆ ಮಾಡಿ ಮಠದ ಜಗದ್ಗುರು ಶ್ರೀ ಸುರೇಶ್ವರಾಚಾರ್ಯ ಅವರಿಗೆ ಶ್ರೀ ಚಂದ್ರಮೌಳೀಶ್ವರ ಲಿಂಗ ಹಾಗೂ ರತ್ನಗರ್ಭಗಣಪತಿಯನ್ನು ಅನುಗ್ರಹಿಸಿದರು. ಚಂದ್ರಮೌಳಿ ಎಂದರೆ ಚಂದ್ರಕಲೆಯನ್ನು ಶಿರಸ್ಸಿನಲ್ಲಿ ಧರಿಸುವನು ಎಂಬರ್ಥವಿದೆ. ಶ್ರೀ ಶಂಕರರು ಅನುಗ್ರಹಿಸಿ ನೀಡಿದ ಶ್ರೀ ಚಂದ್ರಮೌಳೀಶ್ವರ ಲಿಂಗವು ಸ್ಫ್ಪಟಿಕದ್ದು. ಇಂಥ ಲಿಂಗ ಬೇರೆಲ್ಲೂ ಕಾಣಲು ಸಿಗುವುದಿಲ್ಲ. 1200ಕ್ಕೂ ಹೆಚ್ಚು ವರ್ಷದ ಇತಿಹಾಸವಿರುವ ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಶೃಂಗೇರಿಯಲ್ಲಿ ಎಂಥ ವಿಷಮಸ್ಥಿತಿ ಎದುರಾದರೂ ಶ್ರೀ ಆದಿಶಂಕರರ ಕಾಲದಿಂದ ಇಲ್ಲಿಯ ತನಕ ನಿರಂತರವಾಗಿ ಪೂಜೆ ನಡೆಯುತ್ತಿದೆ. ಮೂವತ್ತೇಳು ಯತಿವರ್ಯರು ಈ ಶಿವಲಿಂಗಕ್ಕೆ ತೋರಿದ ಗಾಢಭಕ್ತಿ ಮಹತ್ವಪೂರ್ಣವಾದುದು.