ಹಾಲು ಉತ್ಪಾದನೆ ಹೆಚ್ಚಿಸಲು ಪ್ರೋತ್ಸಾಹ

kh milk
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಜಿಲ್ಲೆಯಲ್ಲಿ ಹಾಲು ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಭರವಸೆ ನೀಡಿದರು.

ದೇವನಹಳ್ಳಿ ಟೌನ್‌ನಲ್ಲಿ ಬೆಂಗಳೂರು ಹಾಲು ಒಕ್ಕೂಟದ ದೇವನಹಳ್ಳಿ ಶಿಬಿರ ಕಚೇರಿಯಲ್ಲಿ  ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಜತೆಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಹಾಲು ಉತ್ಪಾದಕರು ಹಾಲಿನ ಗುಣಮಟ್ಟ ಕಾಪಾಡಿಕೊಳ್ಳುವ ಮೂಲಕ ಹಾಲು ಉತ್ಪಾದನೆಯಲ್ಲಿ ಜಿಲ್ಲೆಯ ಹೆಸರು ಮುಂಚೂಣಿಯಲ್ಲಿ ಇರುವಂತೆ ಶ್ರಮಿಸಬೇಕು ಎಂದು ಹೇಳಿದರು. ಹಾಲು ಉತ್ಪಾದನೆಯಲ್ಲಿ ಜಿಲ್ಲೆಯು ಮುಂಚೂಣಿಯಲ್ಲಿದೆ. ಇದನ್ನು ಹಾಗೇ ಕಾಪಾಡಿಕೊಂಡು ಹೋಗಬೇಕು. ಹೈನುಗಾರಿಕೆ ಪ್ರೋತ್ಸಾಹಿಸಲು ವಿವಿಧ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದ್ದು. ರೈತರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.

ರೇಷ್ಮೆಗೂ ಉತ್ತೇಜನ: ಜಿಲ್ಲೆಯಲ್ಲಿ ರೇಷ್ಮೆ ಬೆಳೆ ಬೆಳೆಯುತ್ತಿರುವವರ ಸಂಖ್ಯೆ ಕಡಿಮೆ ಇದೆ. ರೇಷ್ಮೆ ಬೆಳೆ ಬೆಳೆಯಲು ಸರ್ಕಾರ ಎಲ್ಲಾ ಸವಲತ್ತನ್ನು ರೈತರಿಗೆ ನೀಡುವುದರ ಜತೆಗೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಜಿಲ್ಲೆಯ ಅಭಿವೃದ್ಧಿಗೂ ಗಮನಹರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ಸಚಿವರು ತಿಳಿಸಿದರು. ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗಿ ಬರುವ ಸಾಧ್ಯತೆ ಇದೆ ಹಾಗಾಗಿ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿಕೊಳ್ಳಬೇಕು ಎಂದರು.

ಎಲ್ಲ ಸೌಲಭ್ಯ ನೀಡಲಾಗುವುದು: ಬೆಂಗಳೂರು ಹಾಲು ಒಕ್ಕೂಟದ ನೂತನ ನಿರ್ದೇಶಕ ಎಸ್.ಪಿ.ಮುನಿರಾಜು ಮಾತನಾಡಿ ಹಾಲು ಉತ್ಪಾದಕರಿಗೆ ಸರ್ಕಾರದಿಂದ ಬರುವ ಎಲ್ಲ ಸೌಲಭ್ಯವನ್ನು ಪ್ರಾಮಾಣಿಕವಾಗಿ ದೊರಕಿಸಿಕೊಡುವ ಭರವಸೆ ನೀಡುತ್ತೇನೆ. ಹಾಲು ಉತ್ಪಾದಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ, ಹಾಲು ಉತ್ಪಾದನೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net