

ಬೆಂಗಳೂರು: ಧನುರ್ಮಾಸದ ಅಂಗವಾಗಿ ಶ್ರೀಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನ ವಾರಣಾಸಿ, ಬೆಂಗಳೂರು ಶಾಖೆ ವತಿಯಿಂದ ಹಮ್ಮಿಕೊಂಡಿರುವ ಕಾಶೀ ಜಗದ್ಗುರುಗಳ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀಸಿದ್ಧಾಂತ ಶಿಖಾಮಣಿ ಆದ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮವು ಸೋಮವಾರದಿಂದ 5 ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದೆ.
ವಿಜಯನಗರದ ಹೊಸಹಳ್ಳಿ ಮೆಟ್ರೋ ಸ್ಟೇಷನ್ ಮುಂಭಾಗದಲ್ಲಿರುವ ಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಸೋಮವಾರ ಸಂಜೆ 6 ಗಂಟೆಗೆ ಆರಂಭವಾಗುವ ಕಾರ್ಯಕ್ರಮವನ್ನು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ಉದ್ಘಾಟಿಸಲಿದ್ದಾರೆ. ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಮತ್ತು ಶಿವಗಂಗೆ ಡಾ.ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಲಿದ್ದು, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಜ.7 ರಿಂದ ಜ.10 ರವರೆಗೆ ಪ್ರತಿದಿನ ಬೆಳಗ್ಗೆ 7 ಗಂಟೆಗೆ ಕಾಶೀ ಪೀಠದ ನೂತನ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಭಗವತ್ಪಾದರ ಸಂಗೀತ ರುದ್ರ ಸಹಿತ ಇಷ್ಟಲಿಂಗ ಮಹಾಪೂಜೆ ನಡೆಯಲಿದೆ. ಶಹಾಪುರ ಮತ್ತು ನಾಗಣಸೂರು ಶ್ರೀಗಳು ಸಮ್ಮುಖ ವಹಿಸಲಿದ್ದಾರೆ.
ಜ.8 ರಂದು ಉಜ್ಜಯಿನಿ, ಶ್ರೀಶೈಲ ಮತ್ತು ಕಾಶೀ ಜಗದ್ಗುರು ಸಾನಿಧ್ಯದಲ್ಲಿ ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ರಚಿಸಿರುವ ‘ವೀರಶೈವ ಪಂಚಸೂತ್ರಾಣಿ’ ಗ್ರಂಥದ ಕನ್ನಡಾನುವಾದ ಕೃತಿ ಲೋಕಾರ್ಪಣೆಯಾಗಲಿದೆ.
ಜ.9ರಂದು ನಡೆಯುವ ಕಾರ್ಯಕ್ರಮದಲ್ಲಿ ನೇಪಾಳದ ಭ್ರಷ್ಟಾಚಾರ ವಿರೋಧಿ ಚಳುವಳಿಗಾರ ಹಾಗೂ ಲೇಖಕ ಭರತ್‌ಮಣಿ ಜಂಗಮ್‌ಗೆ 2025ನೇ ಸಾಲಿನ ‘ಪಂಚಾಚಾರ್ಯಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಜ.10ರಂದು ಸಮಾರೋಪ ಸಮಾರಂಭಕ್ಕೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಶಿವಗಂಗೆ ಶ್ರೀಗಳಿಗೆ 2025ನೇ ಸಾಲಿನ ಶಿವಕಮಲ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಎಲ್ಲ ಕಾರ್ಯಕ್ರಮಗಳ ಸದುಪಯೋಗವನ್ನು ಸದ್ಭಕ್ತರು ಪಡೆದುಕೊಳ್ಳುವಂತೆ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಸಿ.ಯು.ಉಮಾದೇವಿ ಉಮಾಶಂಕರ್ ತಿಳಿಸಿದ್ದಾರೆ.