ಶ್ರೀ ಚಿಕ್ಕಮ್ಮ-ದೊಡ್ಡಮ್ಮ ಅವಳಿ ದೇವತೆಗಳ ಪೂಜಾ ಮಹೋತ್ಸವ

IMG-20240404-WA0201
Published on

ಶ್ರೀರಂಗಪಟ್ಟಣ: ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ನಡೆಸಲಾದ ಶ್ರೀ ಚಿಕ್ಕಮ್ಮ-ದೊಡ್ಡಮ್ಮ ಅವಳಿ ದೇವತೆಗಳ ಸಂಭ್ರಮದ ಪೂಜಾ ಮಹೋತ್ಸವಕ್ಕೆ ಗುರವಾರ ವಿಜೃಂಭಣೆಯ ಆಚರಣೆ ಮೂಲಕ ತೆರೆ ಎಳೆಯಲಾಯಿತು.

ಗ್ರಾಮದ ಶ್ರೀರಾಮ ಮಂದಿರದ ಜಗುಲಿಯಲ್ಲಿ ಮಂಗಳವಾರದಿಂದ ದೇವರ ಗುಡ್ಡಪ್ಪ ದಿನೇಶ್ ಅವರ ನೇತೃತ್ವದಲ್ಲಿ ವಿಶೇಷ ಆಚರಣೆಗಳ ಪೂಜಾ ಕಾರ್ಯಗಳನ್ನು ನೆರವೇರಿಸಿದ ಜನರು ಭಕ್ತಿಭಾವದಿಂದ ಮಡಿಪೂಜೆ, ಹೋಮ-ಹವನ, ಪಂಜು ಸೇವೆ, ಕರ್ಪೂರದ ಸೇವೆ, ಈಡುಗಾಯಿ ಸೇವೆ, ಹರಕೆ ಹೊತ್ತ ಪುರುಷ-ಮಹಿಳೆಯರಿಂದ ಬಾಯಿ ಬೀಗ ಹಾಕಿಸಿ ದೇವರ ಪ್ರಾರ್ಥಿಸಿದ್ದು, ಬಳಿಕ ಪ್ರತಿಯೊಬ್ಬ ಗ್ರಾಮಸ್ಥರು ತಮ್ಮ ತಮ್ಮ ಮನೆಗಳಿಂದ ತಂದ ಸಿಹಿ-ಸಪ್ಪೆ ಅಡುಗೆಗಳ ಪ್ರಸಾದಗಳ ಎಡೆಯಿಟ್ಟು ತಂಪು ತೋರಿ ತಮ್ಮ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.

ಗುರುವಾರದ ಕೊನೆಯ ದಿನದಂದು ಬೆಳಗ್ಗೆಯಿಂದ ಸಂಜೆಯವರೆಗೂ ಗ್ರಾಮಸ್ಥರು ಕುರಿ-ಕೋಳಿಗಳನ್ನು ನೀಡಿ ತಮ್ಮ ಮನೆಗಳಲ್ಲಿ ತಯಾರಿಸಿದ ಖಾರ ಅಡುಗೆಯನ್ನು ಪ್ರಸಾದವನ್ನಾಗಿರಿಸಿ ಬಳಿಕ ಗ್ರಾಮದಿಂದ ಅವಳಿ ದೇವತೆಗಳನ್ನು ಬೃಹತ್ ಮೆರವಣಿಗೆಯಲ್ಲಿ ತಮಟೆ-ನಗಾರಿ ಮಂಗಳವಾದ್ಯಗಳ ಸದ್ದಿನೊಂದಿಗೆ ಸಾಗಿದರು. ಈ ವೇಳೆ ಅವಳಿ ದೇವರ ಉತ್ಸವಕ್ಕೆ ಅಡ್ಡಲಾಗಿ ಮಲಗಿ ಆಶೀರ್ವಾದ ಪಡೆದ ಗ್ರಾಮಸ್ಥರು ಅಂತಿಮವಾಗಿ ಗ್ರಾಮದ ಹೊರವಲಯಕ್ಕೆ ಕೊಂಡೊಯ್ದು ಗಡಿಯಲ್ಲಿ ಪ್ರತಿಷ್ಠಾಪಿಸಿ ಗ್ರಾಮ ಹಾಗೂ ಗ್ರಾಮಸ್ಥರ ಒಳಿತಿಗೆ ಪೂಜೆ ಸಲ್ಲಿಸಿ ಊರಿಗೆ ಮರಳಿದರು.
ಗ್ರಾಮದ ಯಜಮಾನ್ ಶ್ರೀಧರ್, ಶ್ರೀನಿವಾಸ್, ವಾರದ ದಾಸಪ್ಪ, ಪೇಪರ್ ಬಸವರಾಜು ಮುಖಂಡರು ಸೇರಿದಂತೆ ಗ್ರಾಮಸ್ಥರು ಭಾಗಿಯಾಗಿದ್ದರು.

ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಕಳೆದೆರಡು ದಿನಗಳಿಂದ ನಡೆದ ಚಿಕ್ಕಮ್ಮ ದೊಡ್ಡಮ್ಮ ದೇವರುಗಳ ಪೂಜಾ ಮಹೋತ್ಸವಕ್ಕೆ ಗುರುವಾರ ಅಂತಿಮ ದಿನದ ಪೂಜಾ-ಕಾರ್ಯಗಳನ್ನು ವಿಜೃಂಭಣೆಯಿಂದ ನೆರವೇರಿಸಿ ತೆರೆ ಎಳೆಲಾಗಿದ್ದು, ಗ್ರಾಮದ ಗಡಿಗೆ ಅವಳಿ ದೇವತೆಯರ ಉತ್ಸವವನ್ನು ಕೊಂಡೊಯ್ಯುವ ವೇಳೆ ಗ್ರಾಮಸ್ಥರು ದೇವರ ಉತ್ಸವಗಳಿಗೆ ಅಡ್ಡ ಮಲಗಿ ಆರ್ಶಿವಾದೊಂದಿಗೆ ಶ್ರೀರಕ್ಷೆ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net