

ಕುಶಾಲನಗರ: ಕಾವೇರಿ ನದಿ ತೀರದಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಶಾಸ್ತಾ ಪೂಜೆ, ದೇವರಿಗೆ ಅಭಿಷೇಕ, ನವಕ ಹೋಮ ಮತ್ತು ಕಳಶ ಪೂಜೆ ನೆರವೇರಿತು.
ಬಳಿಕ ಬೈಚನಹಳ್ಳಿಯ ಅಂತರಕಟ್ಟೆ ದೇವಾಲಯದಿಂದ ಪಾಲಕೊಂಬುವನ್ನು ಚಂಡೆವಾದ್ಯದೊಂದಿಗೆ ಮೆರವಣಿಗೆ ಮೂಲಕ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ತರಲಾಯಿತು.
ಮಂಡಲಪೂಜೆ ಅಂಗವಾಗಿ ಗುರುವಾರ ಗಣಪತಿ ಹೋಮ, ಧ್ವಜಾರೋಹಣ, ಉಯ್ಯಲೆ ಸೇವೆ ಜರುಗಿತು. ಶುಕ್ರವಾರ ನವಗ್ರಹ ಹೋಮ ಮತ್ತು ಸಂಜೆ ಉಯ್ಯಲೆ ಸೇವೆ ನೆರವೇರಿತು. 500ಕ್ಕೂ ಹೆಚ್ಚು ಅಯ್ಯಪ್ಪ ಮಾಲಾಧಾರಿಗಳು ಮತ್ತು ಭಕ್ತರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಮಂಡಲ ಪೂಜೆ ಕರ್ಪುಸ್ವಾಮಿ ಅವರ ನೇತೃತ್ವದಲ್ಲಿ ನಡೆದರೆ, ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ಮತ್ತು ಸೋಮಶೇಖರ್ ಪೂಜಾ ಕೈಂಕರ್ಯ ನಡೆಸಿಕೊಟ್ಟರು.
ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಬಿ.ಪಿ.ಗಣಪತಿ, ಕಾರ್ಯದರ್ಶಿ ಮಹೇಶ್ ನಲ್ವಾಡೆ, ಖಜಾಂಚಿ ಸುಬ್ರಮಣಿ, ನಿರ್ದೇಶಕರಾದ ವಿ.ಎಸ್.ಅನಂದಕುಮಾರ್, ಎಚ್.ಎಂ.ಚಂದ್ರು, ಶ್ರೀನಿವಾಸ್, ನವೀನ್, ಶಂಕರ್ ಇತರರು ಹಾಜರಿದ್ದರು.