ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು: ಪೊನ್ನಣ್ಣ

26mdk09
Published on

ಮಡಿಕೇರಿ:

ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ಇದರಿಂದ ಜನಪ್ರತಿನಿಧಿಗಳು ಜನರ ನಿರೀಕ್ಷೆಗೆ ತಕ್ಕಂತೆ ಹೆಚ್ಚು ಕೆಲಸ ಮಾಡಲು ಸಾಧ್ಯ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಕಾರ್ಯಗಳು ಹಾಗೂ ಸಾರ್ವಜನಿಕರಿಗೆ ಸ್ಪಂದಿಸಬೇಕಾದ ಕೆಲಸಗಳ ಬಗ್ಗೆ ಶುಕ್ರವಾರ ನಡೆದ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.

ಚುನಾವಣೆ ಸಂದರ್ಭದಲ್ಲಿ ನೀಡಲಾಗಿದ್ದ ಭರವಸೆಯ ಪ್ರಣಾಳಿಕೆಯನ್ನು ಈಡೇರಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ಆ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಮತ್ತು ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಎಲ್ಲಾ ಹಂತದ ಅಧಿಕಾರಿಗಳು ಕೈಜೋಡಿಸಬೇಕು. ಸರ್ಕಾರದ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಹೊಸ ಆದೇಶ ಹೊರಡಿಸಿದ್ದು, ಈಗಾಗಲೇ ಪೂರ್ಣವಾಗಿರುವ ಕಾಮಗಾರಿಗಳಿಗೆ ಹಣ ಬಿಡುಗಡೆಗೆ ಬಾಕಿ ಇದ್ದಲ್ಲಿ, ಪಟ್ಟಿಯನ್ನು ಒದಗಿಸಬೇಕು. ಭಾಗಮಂಡಲ ಮೇಲುಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಮದು ಸೂಚಿಸಿದರು. ಈ ಬಗ್ಗೆ ಮಾಹಿತಿ ನೀಡಿದ ಕಾವೇರಿ ನೀರಾವರಿ ನಿಗಮದ ಎಇಇ ನವೀನ್ ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಕೊಯನಾಡು ಬಳಿ ಕಿಂಡಿ ಅಣೆಕಟ್ಟುವಿನಲ್ಲಿ ಪ್ರವಾಹ ಸಂದರ್ಭದಲ್ಲಿ ಮರದ ದಿಮ್ಮಿಗಳು ಸಂಗ್ರಹವಾಗುತ್ತಿದ್ದು, ಇದರಿಂದ ಪ್ರವಾಹ ಉಂಟಾಗಿ ಅಲ್ಲಿನ ಕುಟುಂಬಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಮಾಹಿತಿ ಇದೆ. ಸ್ಥಳೀಯರಿಗೆ ತೊಂದರೆಯಾಗದಂತೆ ಗಮನಹರಿಸಬೇಕು ಎಂದು ಸೂಚಿಸಿದರು.

ಜಲಜೀವನ್ ಮಿಷನ್ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ದೇವಣಗೇರಿ ಕಾಲೋನಿ ಹಾಗೂ ಟಿ.ಶೆಟ್ಟಿಗೇರಿ ಸೇರಿದಂತೆ ಹಲವು ಕಡೆಗಳಲ್ಲಿ ಕುಡಿಯುವ ನೀರು ಸಂಪರ್ಕ ಕಲ್ಪಿಸುವಂತೆ ಸಂಬಂಧಪಟ್ಟ ಎಂಜಿನಿಯರ್‌ಗೆ ಎ.ಎಸ್.ಪೊನ್ನಣ್ಣ ಸೂಚಿಸಿದರು. ಹಾಡಿಗಳಲ್ಲಿ ವಾಸಿಸುವ ಜನರಿಗೆ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ಮುಂದಾಗಬೇಕು. ಇದಕ್ಕಾಗಿ ಜಾಗ ಗುರುತಿಸುವಂತಾಗಬೇಕು ಎಂದರು. ನದಿ ದಡದಲ್ಲಿ ವಾಸಿಸುವ ಜನರನ್ನು ಸ್ಥಳಾಂತರಕ್ಕೆ ಕ್ರಮವಹಿಸುವಂತೆ ಶಾಸಕರು ಹೇಳಿದರು. ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಗುಹ್ಯ, ಸಿದ್ದಾಪುರ, ಕರಡಿಗೋಡಿನಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಬೇಕಿದೆ. ಅಲ್ಲಿನ ಜನರು ೫-೬ ಕಿ.ಮೀ. ದೂರದಲ್ಲಿದ್ದರೆ ತೆರಳುವುದಿಲ್ಲ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಗ್ರಾ.ಪಂ.ನಲ್ಲಿ ನಿರ್ಧಾರ ಮಾಡಿ, ಹತ್ತಿರದಲ್ಲಿ ನಿವೇಶನ ಕಲ್ಪಿಸಬೇಕಿದೆ ಎಂದರು.

ಪೊನ್ನಂಪೇಟೆ ಕ್ರೀಡಾ ವಸತಿ ಶಾಲೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಉಳಿಸಿಕೊಂಡು ಕೊಡಗು ಜಿಲ್ಲೆಯ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಮಾಡಬೇಕು. ಆದ್ದರಿಂದ ಈ ಹಿಂದೆ ಇದ್ದಂತೆ ಸ್ಥಳೀಯ ವಿದ್ಯಾರ್ಥಿಗಳಿಗೆ ಅವಕಾಶ ಮಾಡಬೇಕು ಎಂದು ಅಧಿಕಾರಿಗೆ ಪೊನ್ನಣ್ಣ ನಿರ್ದೇಶನ ನೀಡಿದರು. ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ದೂರುಗಳು ಕೇಳಿ ಬರದಂತೆ ಎಚ್ಚರ ವಹಿಸಬೇಕು. ಸಿದ್ದಾಪುರದಲ್ಲಿ ಘನತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡುವಂತೆ ಅಲ್ಲಿನ ತಾ.ಪಂ.ಇಒಗೆ ಸೂಚಿಸಿದರು.

ನಾಪೋಕ್ಲು, ಶ್ರೀಮಂಗಲ ಮತ್ತಿತರ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಬಗ್ಗೆ ದೂರುಗಳು ಕೇಳಿಬರುತ್ತಿದೆ. ಆದ್ದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಇಒ ಹುದ್ದೆಗೆ ಸರ್ಕಾರದಿಂದ ಅನುಮತಿ ದೊರೆತಿದೆ. ಈಗಾಗಲೇ ಪೊನ್ನಂಪೇಟೆಯಲ್ಲಿ ತಾ.ಪಂ.ಕಚೇರಿ ಇರುವುದರಿಂದ ವಿರಾಜಪೇಟೆಯಲ್ಲಿ ತಾ.ಪಂ.ಕಚೇರಿ ತೆರೆಯಬೇಕಿದೆ. ಹೊಸ ತಾಲೂಕಿಗೆ ಹುದ್ದೆಗಳು ಮಂಜೂರಾಗಿದ್ದು, ಪೊನ್ನಂಪೇಟೆ ಮತ್ತು ವಿರಾಜಪೇಟೆಯಲ್ಲಿ ಪ್ರಭಾರದಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕಿದೆ. ನಂತರದಲ್ಲಿ ಹಂತ ಹಂತವಾಗಿ ಹುದ್ದೆಗಳು ಭರ್ತಿಯಾಗಲಿದೆ ಎಂದರು.

ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಮಾತನಾಡಿ ಈಗಾಗಲೇ ೯೫ ಬಸ್‌ಗಳು ಸಂಚರಿಸುತ್ತಿವೆ. ನಿರ್ವಾಹಕರು ಮತ್ತು ಚಾಲಕರ ಕೊರತೆ ಇದೆ. ಹಾಗೆಯೇ ವಿರಾಜಪೇಟೆಯಲ್ಲಿ ಕೆಎಸ್‌ಆರ್‌ಟಿಸಿ ಘಟಕ ನಿರ್ಮಾಣಕ್ಕೆ ಹತ್ತಿರದಲ್ಲಿ ಜಾಗ ಬೇಕಿದೆ ಎಂದರು.

ಐಟಿಡಿಪಿ ಇಲಾಖಾ ಅಧಿಕಾರಿ ಹೊನ್ನೆಗೌಡ ಅವರು ಲೈನ್‌ಮನೆಗಳಲ್ಲಿ ವಾಸಿಸುವ ಕುಟುಂಬಗಳಿಗೆ ನಿವೇಶನ ಕಲ್ಪಿಸಬೇಕಿದೆ ಎಂದು ಶಾಸಕರ ಗಮನಕ್ಕೆ ತಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ ಕುಮಾರ್ ಜಿಲ್ಲೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇದೆ ಎಂದರು.

ಎಸ್‌ಪಿ ಕೆ.ರಾಮರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸಿದ್ದೇಗೌಡ, ಜಿ.ಪಂ.ಎಂಜಿನಿಯರ್ ನಾಗೇಂದ್ರಪ್ಪ, ಪಿಎಂಜಿಎಸ್‌ವೈ ಎಂಜಿನಿಯರ್ ಪ್ರಭು, ಡಿಯುಡಿಸಿ ಅಧಿಕಾರಿ ಬಸಪ್ಪ, ಹೆದ್ದಾರಿ ವಿಭಾಗದ ಎಂಜಿನಿಯರ್ ನಾಗರಾಜು, ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಕುಮಾರಸ್ವಾಮಿ, ಕೆಪಿಟಿಸಿಎಲ್ ಎಂಜಿನಿಯರ್ ಮಾದೇಶ, ಸೆಸ್ಕ್ ಎಂಜಿನಿಯರ್ ಅನಿತಾ ಬಾಯಿ, ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕಿ ಗೀತಾ ಇತರರು ಹಲವು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net